ಹೆಬ್ಬಾಳದ ಕೃಷಿ ಕೈಗಾರಿಕೆ ನಿಗಮಕ್ಕೆ ಒಳಪಟ್ಟ ಸುಮಾರು 14 ಎಕರೆ ಪ್ರದೇಶದಲ್ಲಿ ಮಂತ್ರಿಗಳಿಗೆ ಬಂಗಲೆ ನಿರ್ಮಿಸುವ ಸರ್ಕಾರದ ಪ್ರಸ್ತಾವನೆಗೆ ಈಗ ತೀವ್ರ ವಿರೋಧ ವ್ಯಕ್ತವಾಗಿದೆ.
ಒಂದೆಡೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಿಗೆ ಇನ್ನೂ ಸರಕಾರಿ ಬಂಗ್ಲೆ ಭಾಗ್ಯ ದೊರಕಿಲ್ಲ. ಇನ್ನೊಂದೆಡೆ ವಾಸ್ತು ದೋಷ ಎಂಬ ಒಂದೇ ಕಾರಣಕ್ಕೆ ಕಾವೇರಿ ಹಾಗೂ ಅನುಗ್ರಹಗಳು ಯಾರಿಗೂ ಬೇಡವಾಗಿವೆ. ಅಲ್ಲದೇ, ಮಾಜಿ ಸಚಿವ ರೇವಣ್ಣ ಮಂತ್ರಿಗಿರಿ ಹೋಗಿ ಒಂದು ವರ್ಷ ಕಳೆದರೂ ಬಂಗಲೆ ಬಿಡುವ ಔದಾರ್ಯ ತೋರಿಲ್ಲ. ಇಷ್ಟರ ನಡುವೆ ಅದ್ದೂರಿ ಬಂಗಲೆಗಳ ನಿರ್ಮಾಣಕ್ಕೆ ಮುಂದಾಗಿದೆ.
ಸರಕಾರದ ಈ ಐಷಾರಾಮಿ ನಿರ್ಧಾರದ ಬಗ್ಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು, ಅಗತ್ಯಕ್ಕೆ ತಕ್ಕಂತೆ ಬಂಗಲೆಗಳನ್ನು ಕಟ್ಟಲಿ. ಅದನ್ನು ಬಿಟ್ಟು ವಾಸ್ತು ಹೆಸರಲ್ಲಿ ಅರಮನೆಗಳ ನಿರ್ಮಾಣ ಬೇಡ. ಈಗ ಒಬ್ಬೊಬ್ಬರು ಎರಡೆರಡು ಮನೆಗಳನ್ನು ಇಟ್ಟುಕೊಳ್ಳಲು ಹವಣಿಸುತ್ತಿದ್ದಾರೆ. ವಾಸ್ತು ಹೆಸರಿನಲ್ಲಿ ಕೆಲವು ಮನೆಗಳು ಯಾರಿಗೂ ಬೇಡವಾಗಿದೆ ಎಂದಿದ್ದಾರೆ.
ಜನಸಾಮಾನ್ಯರ ಆಶ್ರಯಕ್ಕೆ ಕಟ್ಟಿಬದ್ಧವಾಗಬೇಕಾದ ಸರ್ಕಾರ ಬಂಗಲೆ ನಿರ್ಮಾಣಕ್ಕೆ ಹೊರಟಿದೆ. ಇದರಿಂದಲೇ ಸರಕಾರದ ಆದ್ಯತೆ ಯಾವುದಕ್ಕೆಂದು ತಿಳಿಯುತ್ತದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ. |