ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಮಾನವಹಕ್ಕು ಆಯೋಗದ ಐಜಿಪಿ ಬಿಪಿನ್ ಗೋಪಾಲ್ ಕೃಷ್ಣ ಪೊಲೀಸ್ ಸಿಬ್ಬಂದಿಗಳೊಂದಿಗೆ ಆರ್.ಟಿ.ನಗರದ ಪೊಲೀಸ್ ಠಾಣೆಗೆ ದಾಳಿ ನಡೆಸಿದ್ದಾರೆ. ಮಾನವ ಹಕ್ಕು ಶಿಕ್ಷಣ ಹಾಗೂ ನಿಯಂತ್ರಣದ ದಕ್ಷಿಣ ಭಾರತದ ಘಟಕ ದೂರು ನೀಡಿತ್ತು.
ಪೊಲೀಸರು ಬಂಧಿಗಳನ್ನು 24 ಗಂಟೆ ತಮ್ಮ ವಶದಲ್ಲಿ ಇರಿಸಿಕೊಳ್ಳಬಹುದು. ಆದರೆ ಈ ಠಾಣೆಯಲ್ಲಿ ಬಂಧಿತರ ಹೆಸರನ್ನು ನಮೂದಿಸಿಲ್ಲ. ಈ ಬಗ್ಗೆ ಯಾವುದೇ ದಾಖಲೆಗಳಿಲ್ಲದಿರುವುದು ನಮ್ಮ ಗಮನಕ್ಕೆ ಬಂದಿದೆ. ಪೊಲೀಸರು ಯಾಕೆ ನೋಂದಾಯಿಸಲಿಲ್ಲ? ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇದು ಕಡ್ಡಾಯವಲ್ಲವೇ? ಎಂದು ಐಜಿಪಿ ಕೃಷ್ಣ ಟಿಒಐಗೆ ತಿಳಿಸಿದ್ದಾರೆ.
ಕಳ್ಳರನ್ನು ಹಾಗೂ ಕಳವು ಮಾಲು ಖರೀದಿದಾರರನ್ನು ಬಂಧಿಸಿದ್ದೇವೆ ಎಂದು ಇನ್ಸ್‌ಪೆಕ್ಟರ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದ ನಂತರವಷ್ಟೇ ಅವರನ್ನು ಕಳ್ಳರೆಂದು ಪರಿಗಣಿಸಬೇಕು. ಠಾಣೆಯಲ್ಲಿ ಕೆಲವರನ್ನು ಥಳಿಸಲಾಗಿದೆ. ಇಂತಹ ಥಳಿತ ಸಹಿಸದೇ ಕಳ್ಳತನ ಮಾಡದಿದ್ದರೂ ಒಪ್ಪಿಕೊಳ್ಳುವ ಸಾಧ್ಯತೆಗಳಿವೆ ಎಂದು ಐಜಿಪಿ ದೂರಿದ್ದಾರೆ.
ಪುಲಕೇಶಿನಗರದ ಟ್ಯಾನರಿ ರಸ್ತೆ ಬಳಿಯ ಕೊಳೆಗೇರಿಯಿಂದ ಪೊಲೀಸರು ಮನಬಂದಂತೆ ಜನರನ್ನು ಹಿಡಿದುಕೊಂಡು ಹೋಗುತ್ತಾರೆ. ಈ ಬಗ್ಗೆ ಅಲ್ಲಿನ ಜನರು ನಮಗೆ ದೂರು ನೀಡಿದ್ದಾರೆ. ಇದಕ್ಕಾಗಿ ವಿಚಾರಣೆ ನಡೆಸಿದೆವು ಎಂದು ಅವರು ತಿಳಿಸಿದ್ದಾರೆ.
ಒಬ್ಬ ಕಳ್ಳನನ್ನು ಬಂಧಿಸಿ ಕಳವಾದ ವಸ್ತುಗಳ ಬಗ್ಗೆ ವಿಚಾರಣೆ ನಡೆಸಲು ಆತನ ಸಹಚರರನ್ನು ಠಾಣೆಗೆ ಕರೆಸಿದೆವು. ಆದರೆ ಅವರು ಪೊಲೀಸ್ ವಿರುದ್ಧ ಕಿರುಕುಳ ನೀಡಿದ ಪ್ರಕರಣ ದಾಖಲಿಸಿದ್ದಾರೆ ಎಂದು ಈ ಕುರಿತು ವಿಚಾರಣೆಯನ್ನು ಮಾನವ ಹಕ್ಕು ಆಯೋಗ ನಡೆಸಿರುವುದಾಗಿ ಡಿಸಿಪಿ (ಉತ್ತರ) ಸೈಯ್ಯದ್ ಹುಸೇನ್ ಹೇಳಿದರು. |