ಬೆಂಗಳೂರು ಸರಣಿ ಬಾಂಬ್ ಸ್ಫೋಟ ನಡೆದು ನಾಲ್ಕು ತಿಂಗಳು ನಡೆದರೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗದ್ದರಿಂದ ಬೇಸತ್ತ ಪೊಲೀಸ್ ಆಯುಕ್ತ ಶಂಕರ ಬಿದರಿ, ಅದರ ಮೇಲ್ವಿಚಾರಣೆಯ ಜವಾಬಾರಿಯನ್ನು ಸ್ವತಃ ತಾವೇ ವಹಿಸಿಕೊಂಡಿದ್ದಾರೆ.
ಈವರೆಗೆ ತನಿಖೆಯ ಮೇಲ್ವಿಚಾರಣೆಯನ್ನು ಜಂಟಿ ಪೊಲೀಸ್ ಕಮೀಷನರ್ ಗೋಪಾಲ್ ಬಿ. ಹೊಸೂರ್ ನಡೆಸುತ್ತಿದ್ದರು. ಇನ್ನು ಮುಂದೆ ನಾವೇ ನೋಡಿಕೊಳ್ಳುವುದಾಗಿ ಶಂಕರಿ ಬಿದರಿ ತಿಳಿಸಿದ್ದಾರೆ.
ಸ್ಫೋಟದ ಸಂಬಂಧ ಈಗಾಗಲೇ 500ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಲಾಗಿದೆ. ಆದರೂ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಈ ತನಿಖಾ ತಂಡದ ಸ್ಫೋಟದ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ನಿರ್ಧರಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ಹಾಗೂ ದೇಶದ ಇತರೆಡೆ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು ಈಗಾಗಲೇ ಕೆಲವರನ್ನು ಬಂಧಿಸಿದ್ದಾರೆ. ಆದರೆ ಬೆಂಗಳೂರು ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಈವರೆಗೂ ಯಾರೊಬ್ಬರನ್ನು ಬಂಧಿಸದಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ. |