ಇತ್ತೀಚೆಗಷ್ಟೇ ಜೆಡಿಎಸ್ ಸಮಾರಂಭವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದ ಸಾಹಿತಿ ಯು.ಆರ್.ಅನಂತಮೂರ್ತಿ ಅವರು, ಇದೀಗ ಜೆಡಿಎಸ್‌ನಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಒಲವು ತೋರಿದ್ದಾರೆಂದು ಮೂಲಗಳು ತಿಳಿಸಿವೆ.ಬೆಂಗಳೂರಿನ ಉತ್ತರ, ಬೆಂಗಳೂರು ದಕ್ಷಿಣ ಇಲ್ಲವೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಅನಂತಮೂರ್ತಿಯವರು ಜೆಡಿಎಸ್‌ನಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅನಂತಮೂರ್ತಿ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸಲು ಜೆಡಿಎಸ್ ನಾಯಕರು ನಿರ್ಧರಿಸಿರುವುದಾಗಿ ಮೂಲಗಳು ಹೇಳಿವೆ.ಕಳೆದ ರಾಜ್ಯಸಭೆ ಚುನಾವಣೆ ವೇಳೆ ಅನಂತಮೂರ್ತಿ ಅವರು ಸ್ಪರ್ಧಿಸಿ ಅತ್ಯಲ್ಪ ಮತಗಳಿಂದ ಸೋಲು ಕಂಡಿದ್ದರು. ಈಗ ಜೆಡಿಎಸ್ ಜತೆ ಸಖ್ಯ ಬೆಳೆಸಿರುವ ಅನಂತಮೂರ್ತಿ ಅದೇ ಪಕ್ಷದಿಂದ ಟಿಕೆಟ್ ಪಡೆದು ಅಖಾಡಕ್ಕೆ ಇಳಿಯುವ ಇಚ್ಚೆ ಹೊಂದಿದ್ದಾರೆಂದು ಹೇಳಲಾಗಿದೆ.ಈ ಹಿಂದೆ ಯು.ಆರ್.ಅನಂತಮೂರ್ತಿ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ವಿರುದ್ಧ ಸೋಲನ್ನು ಅನುಭವಿಸಿದ್ದರು. |