ಕುಂದಾಪುರ ತಾಲೂಕಿನ ಅಮಾಸೆಬೈಲು ತೊಂಬಟ್ಟುವಿನಲ್ಲಿ ನಕ್ಸಲೀಯರ ತಂಡವೊಂದು ಇತ್ತೀಚೆಗೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಕ್ಸಲೀಯರಿಗೆ ಶನಿವಾರ ಶ್ರದ್ದಾಂಜಲಿ ಅರ್ಪಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಹೊರನಾಡು ಸಮೀಪದ ಮಾವಿನಹೊಲದಲ್ಲಿ ಕಳೆದ ಎರಡು ದಿನಗಳ ಹಿಂದೆ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ ಮೂವರು ನಕ್ಸಲೀಯರಿಗೆ ಶ್ರದ್ಧಾಂಜಲಿ ಅರ್ಪಿಸಿದ ನಕ್ಸಲೀಯರು,ಬ್ಯಾನರ್ ಹಾಗೂ ಕರಪತ್ರಗಳನ್ನು ಬಿಟ್ಟು ಹೋಗಿದ್ದು ಅದನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ನಕ್ಸಲ್ ಚಳವಳಿಯಲ್ಲಿ ಹುತಾತ್ಮರಾದ ನಕ್ಸಲೀಯರ ಸಾವನ್ನು ಸಮರ್ಥಿಸಿಕೊಂಡಿರುವ ನಕ್ಸಲ್ ತಂಡ, ಹೋರಾಟಕ್ಕೆ ಸ್ಥಳೀಯರು ಬೆಂಬಲ ನೀಡಬೇಕೆಂದು ಕರಪತ್ರದಲ್ಲಿ ವಿನಂತಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಇದೀಗ ಅಮಾಸೆಬೈಲು, ತೊಂಬಟ್ಟು ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳ ಮತ್ತು ಶಂಕರನಾರಾಯಣ ಪೊಲೀಸ್ ತಂಡ ಜಂಟಿಯಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಮಾವಿನ ಹೊಲದಲ್ಲಿ ಎನ್‌ಕೌಂಟರ್ ನಡೆದಿರುವ ಹಿನ್ನೆಲೆಯಲ್ಲಿ ಪ್ರಭಾಕರ ನೇತೃತ್ವದ ಪೊಲೀಸ್ ತಂಡ ಪರಿಶೀಲನೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಸ್ಫೋಟಕ ತಂಡದಿಂದಲೂ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದೆ. |