ರಾಜ್ಯದ ವಿವಿಧೆಡೆ ಎಂಟು ವರ್ಷಗಳ ಹಿಂದೆ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೀನ್‌ದಾರ್ ಅಂಜುಮಾನ್ ಸಂಘಟನೆಯ 23ಮಂದಿ ದೋಷಿತರ ಶಿಕ್ಷೆಯ ಪ್ರಮಾಣವನ್ನು ನ.28ಕ್ಕೆ ಘೋಷಿಸುವುದಾಗಿ ವಿಶೇಷ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.
ಗುಲ್ಬರ್ಗ, ಹುಬ್ಬಳ್ಳಿ ಹಾಗೂ ಬೆಂಗಳೂರಿನ ಚರ್ಚ್‌ಗಳಲ್ಲಿ 8ವರ್ಷದ ಹಿಂದೆ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ದೀನ್‌ದಾರ್ ಅಂಜುಮಾನ್ ಸಂಘಟನೆಯ 23ಮಂದಿ ದೋಷಿತರ ಕುರಿತು ಇಂದು ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯ ತೀರ್ಪನ್ನು 28ಕ್ಕೆ ನೀಡುವುದಾಗಿ ಹೇಳಿದೆ.
2000ರಲ್ಲಿ ಬೆಂಗಳೂರಿನ ಜಗಜೀವನ್‌ರಾಮ್ ನಗರ, ಹುಬ್ಬಳ್ಳಿ ಹಾಗೂ ಗುಲ್ಬರ್ಗಾ ವಾಡಿಯಲ್ಲಿನ ಚರ್ಚ್ ಸ್ಫೋಟ ಪ್ರಕರಣದಲ್ಲಿ ಒಟ್ಟು 85ಮಂದಿ ವಿರುದ್ಧ ದೋಷಪಟ್ಟಿ ಸಲ್ಲಿಸಲಾಗಿದ್ದು, ಅದರಲ್ಲಿ 23 ಮಂದಿ ದೋಷಿತರು ಎಂದು ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿ, ನಾಲ್ಕು ಮಂದಿಯನ್ನು ಖುಲಾಸೆಗೊಳಿಸಿತ್ತು.
ಪ್ರಕರಣದಲ್ಲಿ ದೋಷಿತರಾದವರಿಗೆ ಶನಿವಾರ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಾಗುವುದು ಎಂದು ವಿಶೇಷ ನ್ಯಾಯಾಲಯದ ನ್ಯಾಯಪೀಠ ತಿಳಿಸಿತ್ತು.
ಪ್ರಕರಣಕ್ಕೆ ಸಂಬಧಿಸಿದಂತೆ ಪ್ರಮುಖ 15 ಮಂದಿ ತಲೆಮರೆಸಿಕೊಂಡಿದ್ದು, ಅವರಿಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತಾದರೂ ಅವರಾರು ಪತ್ತೆಯಾಗಿರಲಿಲ್ಲ.
ನಗರದ ಮಿನರ್ವ್ ಮಿಲ್ ಸಮೀಪ ಆರೋಪಿಗಳು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ್ದು, ಆ ಸಂದರ್ಭದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು, ಘಟನೆಯಲ್ಲಿ ಬದುಕುಳಿದ ಇಬ್ರಾಹಿಂ ಎಂಬಾತನಿಂದ ಚರ್ಚ್ ಸ್ಫೋಟ ಪ್ರಕರಣದ ವಿವರ ಬಯಲುಗೊಂಡಿತ್ತು.
ನ್ಯಾಯಾಧೀಶರಿಗೆ ಬೆದರಿಕೆ: ಚರ್ಚ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ಮತ್ತು ಸರಕಾರಿ ಅಭಿಯೋಜಕರಿಗೆ ಎರಡು ತಿಂಗಳ ಹಿಂದೆ ಬೆದರಿಕೆ ಪತ್ರವೊಂದು ಬಂದಿತ್ತು.
ತೀರ್ಪು ಶನಿವಾರ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ನ್ಯಾಯಾಲಯ ಆವರಣ ಮತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಎರಡು ತಿಂಗಳ ಹಿಂದೆ ಬಂದ ಪತ್ರದಲ್ಲಿ, ದುಷ್ಕರ್ಮಿಗಳು, ತಮ್ಮ ಪರ ತೀರ್ಪು ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಎರಡು ತಿಂಗಳ ಹಿಂದೆ ದೂರು ದಾಖಲಿಸಲಾಗಿತ್ತು. |