ರಾಜ್ಯ ವಿಧಾನಸಭೆಯ ಏಳು ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಪ್ರಕಟಗೊಳಿಸಿದ್ದು, ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ.
ಮಧುಗಿರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ಬಾಕಿ ಇರುವುದರಿಂದ ಆ ಕ್ಷೇತ್ರದ ಚುನಾವಣೆ ಪ್ರಕಟಿಸಿಲ್ಲ. ಉಳಿದಂತೆ ಬೆಳಗಾವಿ ಜಿಲ್ಲೆಯ ಅರಭಾವಿ, ಹುಕ್ಕೇರಿ, ತುಮಕೂರು ಜಿಲ್ಲೆಯ ತುರುವೇಕೆರೆ, ಮಂಡ್ಯ ಜಿಲ್ಲೆಯ ಮದ್ದೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪುರ, ರಾಯಚೂರು ಜಿಲ್ಲೆಯ ದೇವದುರ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ.
ಚುನಾವಣೆ ಕುರಿತು ಡಿಸೆಂಬರ್ 3ರಂದು ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಡಿಸೆಂಬರ್ 10ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ಅಂತೆಯೇ ಡಿ.11ರಂದು ನಾಮಪತ್ರ ಪರಿಶೀಲನೆ ನಡೆಸಲಿದ್ದು, ಡಿ. 13ರಂದು ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕಳೆದ ಚುನಾವಣೆಯಲ್ಲಿ 110 ಸ್ಥಾನ ಪಡೆದು ಆರು ಜನ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದ್ದ ಬಿಜೆಪಿ ತನ್ನ ಸ್ಥಾನ ಭದ್ರ ಮಾಡಿಕೊಳ್ಳಲು ಕಾಂಗ್ರೆಸ್ ಮೂವರು ಮತ್ತು ಜೆಡಿಎಸ್ ನ ನಾಲ್ವರು ಸೇರಿ ಏಳು ಜನರನ್ನು ಆಪರೇಷನ್ ಕಮಲದ ಮೂಲಕ ತನ್ನತ್ತ ಸೆಳೆಯಿತು.
ಅದರಲ್ಲಿ ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ, ಆನಂದ ಅಸ್ನೋಟಿಕರ್, ಹಾಗೂ ಶಿವನಗೌಡ ನಾಯಕ್ ಇದೀಗ ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಮಾಡಲಾಗಿತ್ತು. ಇನ್ನುಳಿದ ಮೂವರಾದ ಜಗ್ಗೇಶ್, ಬಿ.ಸಿ.ಗೌರಿಶಂಕರ್ ಮತ್ತು ಜೆ. ನರಸಿಂಹಸ್ವಾಮಿ ಅವರನ್ನು ವಿವಿಧ ನಿಗಮ ಮಂಡಳಿಗೆ ನೇಮಕ ಮಾಡಲಾಗಿತ್ತು. |