ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರದ ಖಾತೆ ತೆರೆಯಲು ಕೈಜೋಡಿಸಿದ್ದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಇದೀಗ ಬೆಂಬಲ ಹಿಂಪಡೆಯುವ ಬೆದರಿಕೆ ಒಡ್ಡಿದ್ದಾರೆ.
ಬಿಜೆಪಿ ನಡೆಸಿದ ಆಪರೇಷನ್ ಕಮಲದಿಂದಾಗಿ ಪಕ್ಷೇತರ ಶಾಸಕರು ಬಿಜೆಪಿ ವಿರುದ್ಧ ಅತೃಪ್ತಿಗೊಂಡಿದ್ದಾರೆ. ಬಿಜೆಪಿ ಸರಕಾರವನ್ನು ಬೆಂಬಲಿಸಿರುವ ಪಕ್ಷೇತರ ಶಾಸಕರಲ್ಲಿ ಒಬ್ಬರಾದ ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ ಅಧ್ಯಕ್ಷ, ಕೋಲಾರ ಕ್ಷೇತ್ರದ ಶಾಸಕ ವರ್ತೂರು ಪ್ರಕಾಶ್, ಸರಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆವ ಸಂದೇಶ ರವಾನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಡದಿದ್ದರೆ, ಬಿಜೆಪಿಗೆ ತಾವು ನೀಡಿರುವ ಬೆಂಬಲ ಪುನರ್ ಪರಿಶೀಲಿಸುವುದಾಗಿ ಹೇಳಿದ್ದಾರೆ.
ರಾಜ್ಯದ 80 ಲಕ್ಷ ಕುರುಬರನ್ನು ವಂಚಿಸಿರುವ ಈಶ್ವರಪ್ಪ ಅವರನ್ನು ಸಂಪುಟದಲ್ಲಿ ಇಟ್ಟುಕೊಳ್ಳುವುದೇ ಸರಕಾರಕ್ಕೆ ಒಂದು ಕೆಟ್ಟ ಹೆಸರು. ಹಾಗಾಗಿ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದೇನೆ ಎಂದು ತಿಳಿಸಿದ ಅವರು, ತಮ್ಮ ಮುಂದಿನ ನಿರ್ಧಾರವನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ. |