ಆಡಳಿತರೂಢ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಬೆದರಿಕೆ ಒಡ್ಡಿದ ಬೆನ್ನಲ್ಲೇ, ಅವರು ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ತಿರುಗೇಟು ನೀಡಿದ್ದಾರೆ.
ಅಲ್ಲದೇ ಇಂಧನ ಸಚಿವ ಈಶ್ವರಪ್ಪ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಶಾಸಕ ವರ್ತೂರು ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಈಶ್ವರಪ್ಪ ಯಾವುದೇ ಒಂದು ಸಮುದಾಯಕ್ಕೆ ಸೇರಿದ ನಾಯಕರಲ್ಲ, ಎಲ್ಲಾ ಜನಾಂಗದ ಜೊತೆಗೆ ಬಿಜೆಪಿ ಹಿರಿಯ ನಾಯಕರು ಕೂಡ ಅವರನ್ನು ನಾಯಕ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಈಶ್ವರಪ್ಪ ಜವಾಬ್ದಾರಿಯುತ ನಾಯಕರಾಗಿದ್ದವರು, ಅಂತಹವರ ವಿರುದ್ಧ ಮಾತನಾಡುತ್ತಿರುವ ವರ್ತೂರು ಬಗ್ಗೆ ಮಾತನಾಡುವುದೇ ಅಗತ್ಯವಿಲ್ಲ ಎಂದೆನಿಸುತ್ತದೆ ಎಂದರು. ಅವರಿಗೆ ಅಸಮಾಧಾನವಿದ್ದರೆ ಬೆಂಬಲ ವಾಪಸ್ ಪಡೆಯಲು ಅವರು ಸ್ವತಂತ್ರರಿದ್ದಾರೆ ಎಂದು ತಿಳಿಸಿದರು.
ಸ್ಥಿರ ಸರಕಾರ ಹಾಗೂ ಅನಿವಾರ್ಯ ಸಂದರ್ಭಗಳಿಂದಾಗಿ ಶಾಸಕ ವರ್ತೂರು ಅವರನ್ನು ಸರಕಾರಕ್ಕೆ ಸೇರಿಸಿಕೊಳ್ಳಲಾಯಿತು. ಆಸೆ, ಆಮಿಷಗಳಿಂದಾಗಿ ಸರಕಾರದ ಜೊತೆಗೂಡಿದ ಪ್ರಕಾಶ್ ತಮ್ಮ ನಡವಳಿಕೆ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. |