ವರದಿ: ಕಲಾ (ನ್ಯೂಸ್ ರೂಮ್)
ಮತ್ತೊಂದು ಮಿನಿಸಮರಕ್ಕೆ ಕರ್ನಾಟಕ ಸಜ್ಜುಗೊಂಡಿದೆ. ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ರಾಜಕೀಯ ಪಕ್ಷಗಳು ಮೈಕೊಡವಿ ಎದ್ದು ನಿಂತಿವೆ.
ಈ ಬಾರಿಯ ಉಪಚುನಾವಣೆ ಕೇವಲ ಬಿಜೆಪಿ ಸರ್ಕಾರದ ಹಣೆ ಬರಹವನ್ನು ಮಾತ್ರ ನಿರ್ಧರಿಸುವುದಿಲ್ಲ. ಅದೃಷ್ಟದ ಬೆನ್ನೇರಿ ಅಧಿಕಾರ ಗಿಟ್ಟಿಸಿದ ಐವರು ಪಕ್ಷೇತರರ ಭವಿಷ್ಯ ಕೂಡ ನಿರ್ಧರಿಸಲಿದೆ.
ರಾಜ್ಯದಲ್ಲಿ ಅಧಿಕಾರ ಪಡೆಯಲು ಬೇಕಾಗಿದ್ದ ಸರಳ ಬಹುಮತಕ್ಕೆ ಜೊತೆಗೂಡಿದವರು ಐವರು ಪಕ್ಷೇತರರು. ಗೂಳಿಹಟ್ಟಿ ಶೇಖರ್, ಡಿ. ಸುಧಾಕರ್, ವೆಂಕಟರಮಣಪ್ಪ, ನರೇಂದ್ರ ಸ್ವಾಮಿ ಹಾಗೂ ವರ್ತೂರ್ ಪ್ರಕಾಶ್.
ಈ ಐವರ ಬೆಂಬಲ ಪಡೆಯುವ ಮೂಲಕ ಬಿಜೆಪಿ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ತನ್ನ ಖಾತೆಯನ್ನು ತೆರೆಯಲು ಸಹಾಯಕವಾಯಿತು. ಆದರೆ ಆ ಬಳಿಕ ಪ್ರಾರಂಭಿಸಿದ ಆಪರೇಷನ್ ಕಮಲಕ್ಕೆ ಜೋತು ಬಿದ್ದ ವಿರೋಧ ಪಕ್ಷದ ನಾಯಕರು ಬಿಜೆಪಿಯತ್ತ ಒಲವು ತೋರಿದ್ದಲ್ಲದೆ, ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡರು.
ಇದೀಗ ಅನ್ಯ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡ ಏಳು ಮಂದಿ ಶಾಸಕರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ಒಂದು ವೇಳೆ ಏಳು ಕ್ಷೇತ್ರಗಳಲ್ಲಿ ಬಿಜೆಪಿ ನಿರೀಕ್ಷಿತ ಫಲಿತಾಂಶ ಬಂದಲ್ಲಿ ಪಕ್ಷೇತರರು ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ದೊರೆಯಲಬಲ್ಲದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಅಲ್ಲದೆ, ಇದೀಗ ಐವರು ಪಕ್ಷೇತರರಲ್ಲಿ ನಾಲ್ವರು ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಗೂಳಿಹಟ್ಟಿ ಶೇಖರ್(ಕ್ರೀಡಾ ಮತ್ತು ಯುಜನ ಸೇವಾ ಖಾತೆ ಸಚಿವ), ಡಿ. ಸುಧಾಕರ್(ಸಮಾಜ ಕಲ್ಯಾಣ ಖಾತೆ), ವೆಂಕಟರಮಣಪ್ಪ(ಸಣ್ಣ ಕೈಗಾರಿಕೆ ಮತ್ತು ರೇಷ್ಮೆ ಖಾತೆ), ನರೇಂದ್ರ ಸ್ವಾಮಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ) ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡವರಾಗಿದ್ದಾರೆ. ಈ ಕುರಿತು ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಮುಂದಿನ ಸಚಿವ ಸಂಪುಟದಲ್ಲಿ ಸ್ಥಾನ ಕೊಡುವುದಾಗಿ ಹೇಳಿ ಮುಖ್ಯಮಂತ್ರಿಗಳು ಸಮಾಧಾನಪಡಿಸಿದ್ದಾರೆ. ಇದೀಗ ಆಂತರಿಕ ಬೇಗುದಿಯನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಕೆಲವರಿಗಾದರೂ ಸಚಿವ ಸ್ಥಾನ ನೀಡುವುದು ಅನಿವಾರ್ಯವಾಗಿದೆ.
ಈ ನಡುವೆ ಪಕ್ಷೇತರರ ಶಾಸಕರಲ್ಲಿ ಒಬ್ಬರಾದ ವರ್ತೂರ್ ಪ್ರಕಾಶ್ ಬೆಂಬಲ ಹಿಂಪಡೆಯುವ ಕುರಿತು ತೀಕ್ಷ್ಣ ಮಾತುಗಳನ್ನಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ ಕೂಡ ತಿರುಗೇಟು ನೀಡಿದ್ದಾರೆ. ಇದು ಪಕ್ಷೇತರರ ಹಾಗೂ ಬಿಜೆಪಿ ನಡುವಿನ ಆಂತರಿಕ ಭಿನ್ನಾಭಿಪ್ರಾಯಕ್ಕೆ ವೇದಿಕೆ ಮಾಡಿಕೊಟ್ಟಂತಾಗಿದೆ.
ಉಪ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಫಲಿತಾಂಶ ಬಂದರೆ ಪಕ್ಷೇತರರಲ್ಲಿ ಕೆಲವರಿಗಾದರೂ ಸಚಿವ ಸ್ಥಾನ ತಪ್ಪುವುದು ಖಚಿತವಾಗಿದೆ. ಇದೀಗ ಪಕ್ಷೇತರರ ಮುಂದಿರುವ ದಾರಿಗಳು ಮೂರು ಮಾತ್ರ. ಒಂದು ಬಿಜೆಪಿ ನೀಡುವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸ್ವೀಕರಿಸುವುದು, ಹೊರಗಿನಿಂದ ಬೆಂಬಲ ನೀಡಿ ತಮ್ಮಷ್ಟಕ್ಕೆ ಇರುವುದು ಅಥವಾ ಬಿಜೆಪಿ ಬಿಟ್ಟು ತೆರಳುವುದು. ಏನೇ ಆಗಲಿ ಇವೆಲ್ಲಾ ನಿರ್ಧಾರವಾಗುವುದು ಉಪಚುನಾವಣೆಯ ಫಲಿತಾಂಶದ ಬಳಿಕವೇ.
|