ಜೆಡಿಎಸ್ ಸಮಾವೇಶದ ವೇಳೆ ಉಂಟಾದ ಟ್ರಾಫಿಕ್ ಜಾಮ್‌ಗೆ ಕೊನೆಗೂ ನಗರ ಪೊಲೀಸರು ಕಾರಣ ಹುಡುಕಿದ್ದು, ಇದರ ಪರಿಣಾಮವಾಗಿ ಸಹಾಯಕ ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ಅಮಾನತುಗೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ.
ಕಳೆದ ಸೋಮವಾರದ ಟ್ರಾಫಿಕ್ ಜಾಮ್ ಇಡೀ ಬೆಂಗಳೂರು ನಗರವನ್ನೇ ಕಂಗೆಡಿಸಿತ್ತು. ಇಂತಹ ಸಮಾವೇಶಗಳಿಗೆ ನಗರದಲ್ಲಿ ಅವಕಾಶ ನೀಡಬಾರದೆಂಬ ಕೂಗು ಕೇಳಿ ಬಂದಿತ್ತು. ಅಲ್ಲದೆ, ಈ ಕುರಿತು ಸರಕಾರ ಮತ್ತು ನಗರ ಪೊಲೀಸರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ಈ ಟ್ರಾಫಿಕ್ ಜಾಮ್ ಸಂಬಂಧಪಟ್ಟ ವರದಿ ನೀಡುವಂತೆ ರಾಜ್ಯ ಸರಕಾರ ತಿಳಿಸಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ವರದಿ ಸಿದ್ದಪಡಿಸಿದ್ದಾರೆ.
ಪ್ರಸ್ತುತ ನಗರದ ಸಂಚಾರಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಪೈಕಿ ಶೇ. 80ರಷ್ಟು ಹೊಸಬರು. ಅವರಿಗೆ ಸಂಚಾರಿ ವ್ಯವಸ್ಥೆಯ ಕುರಿತು ಅನುಭವವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಮಧ್ಯಾಹ್ನ 3 ಗಂಟೆಯ ವರೆಗೆ ಟ್ರಾಫಿಕ ಜಾಮ್ ಇಲ್ಲದ ಕಾರಣ ರಸ್ತೆಯಲ್ಲಿ ವಾಹನಗಳ ನಿಲುಗಡೆ ಅವಕಾಶ ಕೊಟ್ಟಿದ್ದು ಮಾತ್ರವಲ್ಲದೆ ಮಾಡಿರುವ ತಪ್ಪಿಗೆ ಕ್ರಮ ಕೈಗೊಂಡಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ. ಇದೇ ವೇಳೆ ಎಸಿಪಿಯವರ ವೈಯರ್‌ಲೆಸ್, ಮೊಬೈಲ್, ಎರಡೂ ಸ್ವಿಚ್ ಆಫ್ ಆಗಿದ್ದವು. ಆ ನಿಟ್ಟಿನಲ್ಲಿ ಎಸಿಪಿ ಅಮಾನತು ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸರಕಾರಕ್ಕೆ ಶಿಫಾರಸು ಮಾಡಲು ಸಿದ್ದತೆ ನಡೆಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. |