ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯ ನೀತಿ ಸಂಹಿತೆಯ ಮೊದಲ ಬಿಸಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರಿಗೆ ತಟ್ಟಿದೆ.
ನೀತಿ ಸಂಹಿತೆ ಚುನಾವಣೆ ನಡೆಯುತ್ತಿರುವ ಆರು ಜಿಲ್ಲೆಗಳ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿತ್ತು. ಸಚಿವ ಉದಾಸಿ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಸರಕಾರಿ ಅತಿಥಿಗೃಹ ಉದ್ಘಾಟನೆಗೆ ತೆರಳಿದ್ದರು. ಆದರೆ ಬೆಳಗಾವಿ ಜಿಲ್ಲೆಯ 2 ಕ್ಷೇತ್ರಗಳಾದ ಹುಕ್ಕೇರಿ ಮತ್ತು ಅರಭಾವಿಗಳಲ್ಲಿ ಈಗಾಗಲೇ ಚುನಾವಣೆ ಘೋಷಣೆಯಾಗಿರುವ ಕ್ಷೇತ್ರಗಳಾಗಿವೆ.
ಈ ಸಂದರ್ಭದಲ್ಲಿ ಬೆಳಗಾವಿಯ ಜಿಲ್ಲಾಧಿಕಾರಿಗಳು ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅತಿಥಿ ಗೃಹ ಉದ್ಘಾಟನೆ ಮಾಡಬೇಡಿ ಎಂದು ಸೂಚನೆ ನೀಡಿದರು. ಉದ್ಘಾಟನೆಯನ್ನೇನೋ ರದ್ದು ಮಾಡಲಾಯಿತು. ಆದರೆ ಸಚಿವ ಉದಾಸಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಮುಂದಾದರು. ಅದಕ್ಕೂ ಜಿಲ್ಲಾಧಿಕಾರಿ ಅವಕಾಶ ನೀಡಿರಲಿಲ್ಲ.
ಇದನ್ನು ವಿರೋಧಿಸಿದ ಉದಾಸಿ, ನಾನು ನಾಲ್ಕೈದು ಚುನಾವಣೆ ಎದುರಿಸಿದ್ದೇನೆ. ನೀತಿ ಸಂಹಿತೆ ಬಗ್ಗೆ ನನಗೂ ತಿಳಿದಿದೆ ಎಂದು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.
ಒಂದು ವೇಳೆ ಸಭೆ ನಡೆಸಿದರೆ ಅದರಲ್ಲಿ ಭಾಗಿಯಾಗುವ ಎಲ್ಲಾ ಅಧಿಕಾರಿಗಳ ಅಮಾನತು ಮಾಡಲು ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿತು. ಇದನ್ನು ಮನಗಂಡ ಸಚಿವರು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ತೆರಳಿದರು. |