ರಾಜ್ಯದ ಸುರಕ್ಷತೆಗಾಗಿ ಅತ್ಯಂತ ಬಲಿಷ್ಠವಾದ ಆಂತರಿಕ ಭದ್ರತಾಪಡೆ ರಚಿಸಲಾಗುವುದು ಎಂದು ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ತಿಳಿಸಿದ್ದಾರೆ.
ಗೃಹರಕ್ಷಕ ದಳದ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಯಾವುದೇ ರೀತಿಯ ಆತಂಕ ಎದುರಾಗದಂತೆ ನೋಡಿಕೊಳ್ಳಲಾಗುವುದು. ಆಂತರಿಕ ಭದ್ರತೆಗೆ ವಿಶೇಷ ರೀತಿಯಲ್ಲಿ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಅಗತ್ಯ ನೆರವು ನೀಡಲಾಗುತ್ತಿದೆ. ಸಿಬ್ಬಂದಿಗೆ ಆತ್ಮವಿಶ್ವಾಸ ತುಂಬಲಾಗುತ್ತಿದೆ. ಗೃಹರಕ್ಷಕ ದಳಕ್ಕೂ ಬಲ ನೀಡಲಾಗುವುದು. ಉಗ್ರರ ದಾಳಿಯನ್ನು ತಡೆಯಲು ಕಟ್ಟೆಚ್ಚರ ವಹಿಸಲಾಗಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.
ಕೇಂದ್ರ ಸರಕಾರದ ಸಹಯೋಗದಲ್ಲಿ ಭದ್ರತಾಪಡೆಯನ್ನು ಬಲಿಷ್ಠಗೊಳಿಸಲಾಗುವುದು. ಈ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ರಾಜ್ಯದ ಕರಾವಳಿಯ ರಕ್ಷಣೆಗೆ ಪೂರ್ಣಪ್ರಮಾಣದ ತಂತ್ರಜ್ಞಾನ ಒದಗಿಸಲು ಕೋರಲಾಗಿದೆ. ಪ್ರಧಾನಿಗೂ ಈ ವಿಷಯ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲು ಹೆಚ್ಚು ನೆರವು ನೀಡುವಂತೆ ನಗರಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಪ್ರಧಾನಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬೇಡಿಕೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
|