ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿಘಾಟ್ ರಸ್ತೆ ರಿಪೇರಿಗೆ ವಿಧಿಸಿದ್ದ ಮೂರು ತಿಂಗಳ ಗಡುವನ್ನು ಆರು ತಿಂಗಳಿಗೆ ವಿಸ್ತರಿಸಿ ಹೈಕೋರ್ಟ್ ಆದೇಶ ನೀಡಿದೆ.
ಶಿರಾಡಿಘಾಟ್ ರಸ್ತೆಯ ಕಳಪೆ ಕಾಮಗಾರಿ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯನ್ಯಾಯಮೂರ್ತಿ ಪಿ.ಡಿ. ದಿನಕರನ್ ಅವರಿದ್ದ ವಿಭಾಗೀಯ ಪೀಠ, ಸಿಬಿಐ ತನಿಖೆಗೆ ಆದೇಶಿಸಿ, ಮೂರು ತಿಂಗಳೊಳಗೆ ಮತ್ತೆ ರಸ್ತೆ ರಿಪೇರಿ ಮಾಡಿ ವರದಿ ನೀಡುವಂತೆ ಸೂಚಿಸಿತ್ತು.
ರಸ್ತೆ ಕಾಮಗಾರಿ ಮುಗಿಸಲು ಮೂರು ತಿಂಗಳ ಕಾಲಾವಕಾಶ ಸಾಲುವುದಿಲ್ಲ. ಬದಲಿಗೆ ಕನಿಷ್ಠ ಆರು ತಿಂಗಳಾದರೂ ಕಾಲಾವಕಾಶದ ಅಗತ್ಯವಿದೆ ಎಂದು ಸರ್ಕಾರ ವಿಭಾಗೀಯ ಪೀಠಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಸರ್ಕಾರದ ಮನವಿಯನ್ನು ಪುರಸ್ಕರಿಸಿದ ವಿಭಾಗೀಯ ಪೀಠ, ಆರು ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಿದೆ.
ಈಗಾಗಲೇ ಸಿಬಿಐ ತನಿಖೆ ನಡೆಸಲು ಆದೇಶವಿರುವುದರಿಂದ ರಸ್ತೆ ರಿಪೇರಿ ಕೈಗೊಂಡರೆ ತನಿಖೆಗೆ ತೊಡಕಾಗಲಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಕೃಷ್ಣಭಟ್ ಪರ ವಕೀಲರು ವಾದಿಸಿದರು. ಇದಕ್ಕುತ್ತರವಾಗಿ ಪೀಠ, ಸಿಬಿಐ ಅಧಿಕಾರಿಗಳು ಮಾಹಿತಿಯನ್ನು ದಾಖಲಿಸಿಕೊಂಡ ನಂತರ ಕಾಮಗಾರಿ ಆರಂಭಿಸುವಂತೆ ಆದೇಶ ನೀಡಿತು. |