ಬಾಬಾ ಬುಡನ್‌ಗಿರಿಯಲ್ಲಿನ ದತ್ತ ಜಯಂತಿಯ ಅಂತಿಮ ದಿನವಾದ ಶುಕ್ರವಾರ ಶಾಸಕ ಸಿ.ಟಿ.ರವಿ ದತ್ತ ಭಕ್ತನ ಮೇಲೆ ಹಲ್ಲೆ ನಡೆಸುವ ಮೂಲಕ ವಿವಾದಕ್ಕೆ ಈಡಾಗಿದ್ದಾರೆ.
ಶಾಸಕ ಸಿಟಿ ರವಿ ಅವರ ನೇತೃತ್ವದಲ್ಲಿ ದತ್ತ ಜಯಂತಿ ಅಂಗವಾಗಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯುತ್ತಿತ್ತು, ಆದರೆ ಕೊನೆಯ ದಿನವಾದ ಶುಕ್ರವಾರ ದತ್ತ ಭಕ್ತನೊಬ್ಬ ಮತ್ತೊಂದು ಕೋಮಿನ ಬಗ್ಗೆ ಅವಹೇಳಕಾರಿಯಾಗಿ ಘೋಷಣೆ ಕೂಗಿದ್ದ ಪರಿಣಾಮ ರವಿ ಅವರು ಹಲ್ಲೆ ನಡೆಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದರಿಂದ ಕುಪಿತಗೊಂಡ ಬಜರಂಗದಳ ಮತ್ತೊಂದು ಗುಂಪು, ಶಾಸಕ ಸಿಟಿ ರವಿಯವರ ಕಪಾಳಮೋಕ್ಷ ಕೃತ್ಯವನ್ನು ಖಂಡಿಸಿ, ಘೇರಾವ್ ಹಾಕಿ ಪ್ರತಿಭಟನೆ ನಡೆಸಿತ್ತು.
ಕಪಾಳಮೋಕ್ಷ ಮಾಡಿಲ್ಲ: ದತ್ತ ಜಯಂತಿ ಸಂದರ್ಭದಲ್ಲಿ ಮತ್ತೊಂದು ಕೋಮಿನ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡಬಾರದು ಎಂದು ಮಹೇಶ್ ಎಂಬಾತನಿಗೆ ಬುದ್ದಿ ಮಾತು ಹೇಳಿದ್ದೆ. ಈ ರೀತಿ ಮಾಡುವುದರಿಂದ ಸಂಘಟನೆಗೆ ಕೆಟ್ಟ ಹೆಸರು ಬರುತ್ತದೆ. ಅಂತಹ ಘೋಷಣೆ ಕೂಗಬಾರದು ಎಂದು ತಾಕೀತು ಮಾಡಿದ್ದೇ ವಿನಃ. ಆತನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಶಾಸಕ ಸಿಟಿ ರವಿ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ. |