ಬಿಜೆಪಿಯ ಆಪರೇಷನ್ ಕಮಲ ಅಂತ್ಯಗೊಂಡ ಬೆನ್ನಲ್ಲೇ, ಇದೀಗ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ಚಾಲನೆ ನೀಡುವ ಮೂಲಕ ಚನ್ನಪಟ್ಟಣದ 7ಮಂದಿ ಜೆಡಿಎಸ್ ಸದಸ್ಯರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ.
ಇದಕ್ಕೆ ಮೊದಲ ಕಂತು ಎಂಬಂತೆ ಚನ್ನಪಟ್ಟಣ ನಗರ ಸಭೆಯ 7 ಮಂದಿ ಜೆ.ಡಿ.ಎಸ್. ಸದಸ್ಯರು ಶುಕ್ರವಾರ ವಿಧ್ಯುಕ್ತವಾಗಿ ಕಾಂಗ್ರೆಸ್ ಸೇರಿದರು. ಈ ಸದಸ್ಯರ ಕಾಂಗ್ರೆಸ್ ಸೇರ್ಪಡೆಯಿಂದ ಚನ್ನಪಟ್ಟಣ ನಗರಸಭೆಯ ಆಡಳಿತ ಕಾಂಗ್ರೆಸ್ ವಶಕ್ಕೆ ಬರಲಿದೆ.
ನಗರಸಭೆ ಸದಸ್ಯರಾದ ಕೃಷ್ಣ, ಸೈಯದ್ ಆಸ್ಗರ್ ಅಲಿ, ಮಹಮ್ಮದ್ ಅಸ್ಲಂ, ಅಹಮದ್ ಖಾನ್, ಎಂ.ರಾಜು ಉಸ್ಮತ್ ಉನ್ನಿಸಾ ಬಾವಾಸಾ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದವರು.
ಪಕ್ಷದ ಕಚೇರಿಯಲ್ಲಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ಗೆ ಸೇರ್ಪಡೆಯಾದ 7 ಮಂದಿ ನಗರಸಭಾ ಸದಸ್ಯರನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಇನ್ನೂ ಬಹಳಷ್ಟು ಮಂದಿ ಕಾಂಗ್ರೆಸ್ ಸೇರಲು ತುದಿಗಾಲಮೇಲೆ ನಿಂತಿದ್ದಾರೆ. ಕನಿಷ್ಠ 100 ಇಂತಹ ಅರ್ಜಿಗಳು ಬಂದಿವೆ ಎಂದು ಹೇಳುವ ಮೂಲಕ ಆಪರೇಷನ್ ಹಸ್ತ ಮುಂದುವರಿಯುವ ಸೂಚನೆ ನೀಡಿದರು.
ಯಾರೇ ಕಾಂಗ್ರೆಸ್ ಸಿದ್ದಾಂತ ಒಪ್ಪಿ ಬಂದರೂ ಅದಕ್ಕೆ ಸ್ವಾಗತವಿದೆ. ಯಾರನ್ನೇ ಆದರೂ ಪಕ್ಷ ಸೇರಿಸಿಕೊಳ್ಳುವ ಮೊದಲು ಜಿಲ್ಲಾ ಘಟಕ, ಬ್ಲಾಕ್ ಕಾಂಗ್ರೆಸ್ನ ಒಪ್ಪಿಗೆ ಪಡೆದೇ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಶಾಸಕ ಸಿ.ಪಿ. ಯೋಗೇಶ್ವರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. |