ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ನೌಕರರಿಗೆ ಶೇ.6ರಷ್ಟು ವೇತನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ಸಾರಿಗೆ ನಿಗಮಗಳ ನೌಕರರಿಗೆ ಹೊಸವರ್ಷದ ಕೊಡುಗೆ ನೀಡಿದೆ.
ಸಾರಿಗೆ ಸಂಸ್ಥೆಯ ಎಲ್ಲಾ ನಿಗಮಗಳು ಹಾಗೂ ಬಿಎಂಟಿಸಿಯ ನೌಕರರಿಗೆ 2008ರ ಏಪ್ರಿಲ್‌ನಿಂದಲೇ ಪೂರ್ವಾನ್ವಯವಾಗುವಂತೆ ಶೇ.6ರಷ್ಟು ವೇತನವನ್ನು ಹೆಚ್ಚಳ ಮಾಡಲಾಗಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ಪ್ರಕಟಿಸಿದ್ದಾರೆ.
ಸಾರಿಗೆ ಸಂಸ್ಥೆಯ ಎಲ್ಲ ನಾಲ್ಕು ನಿಗಮಗಳು ಸೇರಿದಂತೆ ಸುಮಾರು 1 ಲಕ್ಷ ನೌಕರರಿಗೆ ಈ ವೇತನ ಏರಿಕೆ ಅನ್ವಯವಾಗಲಿದ್ದು, ಇದರಿಂದ ವಾರ್ಷಿಕ 396 ಕೋಟಿ ರೂ.ಗಳ ಹೊರೆಯಾಗಲಿದೆ ಎಂದು ತಿಳಿಸಿದರು.
ನೌಕರರ ನಡುವಿನ ತಾರತಮ್ಯ ನಿವಾರಿಸಲು ಹೆಚ್ಚಿನ ಗಮನ ಹರಿಸಿದ್ದು ಈ ಹೆಚ್ಚಳದಿಂದ ಬಹುತೇಕ ತಾರತಮ್ಯ ನಿವಾರಣೆ ಆಗಿದೆ. ಪೂರ್ವಾನ್ವಯದ ಹಣವನ್ನು ನಗದು ರೂಪದಲ್ಲಿ ನೌಕರರಿಗೆ ವಿತರಿಸಲಾಗುವುದು ಎಂದು ವಿವರಿಸಿದರು.
ಟಿಕೆಟ್ ದರವನ್ನು ಕಡಿಮೆ ಮಾಡಲಾಗಿದ್ದು, 200 ರೂ.ವರೆಗಿನ ಟಿಕೆಟ್‌ಗೆ 5 ರೂ ಹಾಗೂ 200 ರೂ. ಮೇಲ್ಪಟ್ಟ ಟಿಕೆಟ್‌ಗೆ 10 ರೂ. ಮುಂಗಡ ಶುಲ್ಕ ವಿಧಿಸಲಾಗುತ್ತಿದೆ. ಈ ಹಿಂದೆ 15 ರೂ.ಗಳಷ್ಟು ಶುಲ್ಕ ವಿಧಿಸಲಾಗುತ್ತಿತ್ತು ಎಂದು ವಿವರಿಸಿದರು.
200 ಕೋಟಿ ಸೋರಿಕೆ: ತನಿಖೆ
ಹುಬ್ಬಳ್ಳಿ ವಿಭಾಗದಲ್ಲಿ 200 ಕೋಟಿ ರೂ.ಗಳಷ್ಟು ಹಣ ಸೋರಿಕೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಲು 10 ಜನರ ತಂಡವನ್ನು ರಚಿಸಲಾಗಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು. |