ರಾಜ್ಯದ 8 ವಿಧಾನಸಭಾ ಕ್ಷೇತ್ರಗಳಿಗೆ ಡಿ. 27ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತ್ರ ನೇರಸ್ಪರ್ಧೆ ಇದ್ದು, ಬೇರೆ ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಿ ನಗಣ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ಆರ್. ಬಿ. ದೇಶಪಾಂಡೆ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಕೆಲ ಜೆಡಿಎಸ್ ಮುಖಂಡರು ಪಕ್ಷ ಸೇರ್ಪಡೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇಶಪಾಂಡೆ, ಈ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತ್ರ ಸ್ಪರ್ಧೆ ಎಂದರು.
ಅಲ್ಪ ಸಂಖ್ಯಾತರು, ದುರ್ಬಲ ವರ್ಗದವರು ಸೇರಿದಂತೆ ಎಲ್ಲ ವರ್ಗದ ಮತದಾರರಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಒಲವು ವ್ಯಕ್ತವಾಗಿದ್ದು, ಈ ವರ್ಗದ ಮತದಾರರು ಜೆಡಿಎಸ್‌ಗೆ ಮತ ನೀಡಿದರೆ ಅದು ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಅರಿತಿದ್ದಾರೆ. ಆದ್ದರಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮಾತ್ರ ಬಿಜೆಪಿಗೆ ಎದುರಾಳಿಯಾಗಿರುತ್ತದೆ ಎಂದು ತಿಳಿಸಿದರು.
ಈ ಚುನಾವಣೆ ಕಾಂಗ್ರೆಸ್‌ಗೂ ಸಹ ಸತ್ವ ಪರೀಕ್ಷೆಯಾಗಿದ್ದು ಕಾಂಗ್ರೆಸ್ ಒಗ್ಗಟ್ಟಿನಿಂದ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಅಲ್ಲದೇ ಆಡಳಿತಾರೂಢ ಬಿಜೆಪಿ ಈ ಚುನಾವಣೆಯಲ್ಲಿ ಹಣ ಬಲದಿಂದ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಶುಭಲತಾ ವಿರುದ್ದ ಕ್ರಮ:
ಕಾರವಾರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಧಾನಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್ ವಿರುದ್ಧ ಇನ್ನೆರಡು ದಿನದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಅಷ್ಟರಲ್ಲಿ ಅವರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಒಳ್ಳೆಯದು ಎಂದು ಕಿಡಿಕಾರಿದರು. |