ರೈಲ್ವೆ ಇಲಾಖೆಯ ಬಳಿಕ ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡಿಗರಿಗೆ ಯಾವುದೇ ಎಗ್ಗಿಲ್ಲದೆ ಅನ್ಯಾಯ ಮಾಡಲು ಟೊಂಕ ಕಟ್ಟಿ ನಿಂತಿರುವುದಾಗಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಆರೋಪಿಸಿದ್ದು, ಇದರ ವಿರುದ್ಧ ಡಿ.16ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ರಾಜ್ಯದ ವಿವಿಧ ಶಾಖೆಗಳಲ್ಲಿ ನಡೆಸಲಾದ 1600ಕ್ಕೂ ಹೆಚ್ಚು ಗುಮಾಸ್ತ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರನ್ನು ಹೊರಗಿಟ್ಟು ಉತ್ತರ ಭಾರತದವರಿಗೆ ಮಣೆ ಹಾಕುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ ಎಂದು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ದೂರಿದೆ.
2008ರಲ್ಲಿ ಬೆಂಗಳೂರಿನಲ್ಲಿ ನಡೆಸಿದ 300ಕ್ಕೂ ಹೆಚ್ಚು ಗುಮಾಸ್ತರ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಕೇವಲ 20 ಹುದ್ದೆಗಳನ್ನು ಮಾತ್ರ ನೀಡಲಾಗಿದೆ. ಗ್ರಾಮೀಣ ವಿಭಾಗದಲ್ಲಿ 200 ಹುದ್ದೆಗಳಿಗೆ ನಡೆಸಲಾದ ನೇಮಕಾತಿಯಲ್ಲಿ ಕನ್ನಡಿಗರಿಗೆ ಸಿಕ್ಕ ಪಾಲು ಕೇವಲ 40 ಹುದ್ದೆಗಳು ಮಾತ್ರ.
ಗುಮಾಸ್ತ ಹುದ್ದೆಗಳಿಗೆ ಸಂದರ್ಶನ ಮಾಡುವಾಗಲೂ ಯಾವೊಬ್ಬ ಕನ್ನಡಿಗನೂ ಇರುವುದಿಲ್ಲ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಅಭ್ಯರ್ಥಿಗಳ ನೇಮಕಾತಿ ಹಾಗೂ ಸಂದರ್ಶನಕ್ಕೆ ಕನ್ನಡಿಗರೊಬ್ಬರನ್ನು ಸರಕಾರ ನೇಮಿಸುವ ಮೂಲಕ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಬೇಕು’ ಎಂದು ಒಕ್ಕೂಟದ ಅಧ್ಯಕ್ಷ ಕೆ. ಪ್ರಭಾಕರ ರೆಡ್ಡಿ ಒತ್ತಾಯಿಸಿದ್ದಾರೆ. |