ಬೆಂಗಳೂರು ಈಗ ಭಾರತದ ನ್ಯಾನೋ ಸಿಟಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಉಪರಾಷ್ಟ್ರಪತಿ ಎಂ. ಹಮೀದ್ ಅನ್ಸಾರಿ, ರಾಜ್ಯಪಾಲ ರಾಮೇಶ್ವರ ಠಾಕೂರ್, ಪ್ರಧಾನ ಮಂತ್ರಿಗಳ ವಿಜ್ಞಾನ ಸಲಹಾ ಮಂಡಳಿ ಅಧ್ಯಕ್ಷ ಪ್ರೊ ಸಿ.ಎನ್.ರಾವ್ ಸೇರಿದಂತೆ ಹಲವು ಮುಖಂಡರು ಬೆಂಗಳೂರು ಭಾರತದ ನ್ಯಾನೋ ಸಿಟಿ ಎಂದು ವಿದ್ಯುಕ್ತವಾಗಿ ಘೋಷಣೆ ಮಾಡಿದ್ದಾರೆ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಏರ್ಪಡಿಸಿದ್ದ ಎರಡನೇ ನ್ಯಾನೋ ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ಘೋಷಣೆ ಮಾಡಲಾಯಿತು.
ಈ ಘೋಷಣೆಯೊಂದಿಗೆ ರಾಜ್ಯದಲ್ಲಿ ನ್ಯಾನೋ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ದೊರೆಯಲಿದೆ. ಅಲ್ಲದೆ, ಕೇಂದ್ರ ಸರ್ಕಾರ ಬೆಂಗಳೂರಿಗೆ ನ್ಯಾನೋ ಸಂಶೋಧನಾ ಕೇಂದ್ರ ನೀಡಿದ್ದು, ಸಂಶೋಧನೆಗಾಗಿ 100 ಕೋಟಿ ರೂ. ಒದಗಿಸಿದೆ. ಈ ಕುರಿತು ಮಾತನಾಡಿದ ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ, ದೇಶದಲ್ಲಿ ಐಟಿ ಕ್ಷೇತ್ರದಲ್ಲಿ ರಾಜ್ಯ ಮುಂದಿದೆ. ಇದೀಗ ನ್ಯಾನೋ ತಂತ್ರಜ್ಞಾನದಲ್ಲೂ ಆ ಹೆಗ್ಗಳಿಕೆಯನ್ನು ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಏನಿದು ನ್ಯಾನೋ ತಂತ್ರಜ್ಞಾನ?
ನ್ಯಾನೋ ಹೆಸರು ಜನತೆಗೆ ಪರಿಚಿತವಾಗಿದ್ದು, ಪ್ರಾಯಶಃ ಟಾಟಾ ಮುಖ್ಯಸ್ಥ ರತನ್ ಟಾಟಾ ನಿರ್ಮಿಸಲು ಹೊರಟಿರುವ ನ್ಯಾನೋ ಕಾರು. ಆದರೆ ನ್ಯಾನೋ ತಂತ್ರಜ್ಞಾನವೆಂಬುದು ಅಣು ಅಥವಾ ಪರಮಾಣು ಗಾತ್ರದ ಕಣಗಳನ್ನು ನಿಯಂತ್ರಿಸುವ ತಂತ್ರಜ್ಞಾನ. ಇದರ ಮೂಲಕ 100 ನ್ಯಾನೋ ಮೀಟರ್ ಅಥವಾ ಅದಕ್ಕಿಂತ ಸಣ್ಣ ಗಾತ್ರದ ರಚನೆಯಲ್ಲಿ ಕಣಗಳ ವಿವಿಧ ರೀತಿಯ ಜೋಡಣೆಯಿಂದ ಹೊಸ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. 1 ನ್ಯಾನೋ ಮೀಟರ್ ಎಂದರೆ 1 ಮೀಟರ್ ಅನ್ನು 1 ಶತಕೋಟಿಗಳಾಗಿ ವಿಭಾಗಿಸಿದಾಗ ಸಿಗುವ ಒಂದು ಭಾಗವಾಗಿದೆ. |