ಕಾಂಗ್ರೆಸ್ಸಿನಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಬರುವುದಾದರೆ ಅವರಿಗೆ ಸ್ವಾಗತವಿದೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡದೇ ಮೂಲೆಗುಂಪು ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅವರ ಭವಿಷ್ಯವನ್ನು ಅವರೇ ನಿರ್ಧರಿಸಬೇಕು ಎಂದು ಈಶ್ವರಪ್ಪ ತಿಳಿಸಿದರು.
ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವುದು ಖಚಿತ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಚುನಾವಣಾ ದಿನಾಂಕ ನಿಗದಿಗೆ ಮೊದಲೇ ಸಿದ್ಧವಾಗಿರುವುದು ಪಕ್ಷಕ್ಕೆ ವರದಾನವಾಗಲಿದೆ ಎಂದರು.
ಮಧುಗಿರಿಯಲ್ಲಿ ಸ್ಪರ್ಧಿಸುತ್ತಿರುವ ಅನಿತಾ ಕುಮಾರಸ್ವಾಮಿ ಅವರು ಹೊಸಬರು. ಮಾಜಿ ಮುಖ್ಯಮಂತ್ರಿಯವರ ಪತ್ನಿ ಎಂಬ ಕಾರಣಕ್ಕಾಗಿ ಯಾರೂ ಮತ ಹಾಕಲಾರರು ಎಂದು ಅಭಿಪ್ರಾಯಪಟ್ಟ ಸಚಿವರು, ಮತದಾರರು ಅಭಿವೃದ್ಧಿ ಚಟುವಟಿಕೆಗಳನ್ನು ಗಮನಿಸಿ ಬಿಜೆಪಿಗೆ ಮತ ಹಾಕುತ್ತಾರೆ. ಚೆನ್ನಿಗಪ್ಪ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿದರು. |