ಕಾಂಗ್ರೆಸ್‌ನಲ್ಲಿ ಇದ್ದುಕೊಂಡೇ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇರವಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಆಪಾದಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಆಪಾದನೆ ಮಾಡಿದ ಹೊರಟ್ಟಿ, ಬರುವ ಉಪಚುನಾವಣೆಯಲ್ಲಿ ಕೆಲ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಸಿದ್ದರಾಮಯ್ಯ ಬೆಂಬಲಿಸುತ್ತಿರುವುದಾಗಿ ಬಿಜೆಪಿಯವರೇ ಹೇಳುತ್ತಿದ್ದಾರೆ ಎಂದರು. ಭಾರತೀಯ ಜನತಾಪಕ್ಷದ ಆಡಳಿತ ವೈಖರಿ ನೋಡಿ ಜನ ಬೇಸತ್ತಿದ್ದಾರೆ. ಒಳಜಗಳದಲ್ಲಿ ತೊಡಗಿರುವ ಕಾಂಗ್ರೆಸ್‌ನಿಂದ ಅಭಿವೃದ್ದಿ ಸಾಧ್ಯವಿಲ್ಲ. ಹಿಂದಿನ 20 ತಿಂಗಳ ಆಡಳಿತದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಮಾಡಿದ ಜನೋಪಯೋಗಿ ಕೆಲಸಗಳನ್ನು ಜನ ಮರೆತಿಲ್ಲ. ಈ ಎಲ್ಲ ಅಂಶಗಳೂ ಉಪಚುನಾವಣೆಯಲ್ಲಿ ನಮಗೆ ಸಹಕರಿಸಲಿದ್ದು, ಚಾಣಾಕ್ಷ ಮತದಾರರು ಇದನ್ನು ಅರ್ಥಮಾಡಿಕೊಳ್ಳಲಿದ್ದಾರೆ ಎಂದರು.
ನಮ್ಮ ಸರ್ಕಾರವಿದ್ದಾಗ ಚನ್ನಿಗಪ್ಪ ಅವರ ವಿರುದ್ಧ ಬಳ್ಳಾರಿಯ ಜನಾರ್ದನ ರೆಡ್ಡಿ ಮಾಡಿದ ಆರೋಪ ಎಂಥವು, ಬಳಸಿದ ಭಾಷೆ ಎಂಥದ್ದು ಎಂದು ಇಡೀ ರಾಜ್ಯಕ್ಕೇ ತಿಳಿದಿದೆ. ಆದರೆ ಇಂದು ಮಧುಗಿರಿ ಉಪಚುನಾವಣೆಯಲ್ಲಿ ಅವರೇ ಮುಂದು ನಿಂತು ಚೆನ್ನಿಗಪ್ಪ ಪರ ಪ್ರಚಾರ ಮಾಡುತ್ತಿದ್ದಾರೆ. ಇಲ್ಲಿ ಅನಿತಾ ಕುಮಾರಸ್ವಾಮಿಯವರು ಗೆಲ್ಲುವುದು ನಿಶ್ಚಿತ ಎಂದು ನುಡಿದರು. |