ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪಕ್ಷಾಂತರಿಗಳಿಗೆ ಪಾಠ ಕಲಿಸಲು ನಿರ್ಧರಿಸಿದಂತಿದೆ.
ರಾಯಚೂರಿನಲ್ಲಿ ಮಾತನಾಡಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕ್ಯಾನ್ಸರ್‌ನಂತೆ ಕಾಡುತ್ತಿರುವ ಪಕ್ಷಾಂತರ ಪಿಡುಗನ್ನು ನಿವಾರಿಸಲು ಪಕ್ಷಾಂತರ ಕಾಯ್ದೆಗೆ ತಿದ್ದುಪಡಿ ತರಬೇಕು. ಪಕ್ಷಾಂತರ ಮಾಡಿದ ವ್ಯಕ್ತಿ ಕನಿಷ್ಠ 5 ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾರ್ಪಾಟು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಉಗ್ರವಾದ ಹತ್ತಿಕ್ಕುವ ನಿಟ್ಟಿನಲ್ಲಿ ಎಲ್ಲ ಪಕ್ಷಗಳೂ ಒಂದುಗೂಡಬೇಕಿದೆ ಎಂದು ನುಡಿದ ಅವರು, ದೇಶದ ಆರ್ಥಿಕ ನೀತಿಗಳನ್ನು ರೂಪಿಸುವಾಗ ವಿದೇಶಿ ಶಕ್ತಿಗಳ ಅನುಕರಣೆ ಅತಿಯಾಗಿ ಮಾಡುವುದು ಒಳ್ಳೆಯದಲ್ಲ. ಎನ್‌ಡಿಎ ಮತ್ತು ಯುಪಿಎ ಎರಡೂ ಒಕ್ಕೂಟಗಳು ಉತ್ತಮ ಆಡಳಿತ ನೀಡಲು ವಿಫಲವಾಗಿವೆ. ಇದೇ ವೈಫಲ್ಯವನ್ನು ಗಮನದಲ್ಲಿರಿಸಿಕೊಂಡು ತೃತೀಯ ರಂಗದ ಕಾರ್ಯಸೂಚಿ ಸಿದ್ಧಪಡಿಸಲಾಗುವುದು ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಸಂಪೂರ್ಣ ಅಸಮರ್ಥವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಅದು ವಿಫಲವಾಗಿದ್ದು, ಇದೇ ನಮ್ಮ ಪಕ್ಷದ ಅಜೆಂಡಾ ಆಗಲಿದೆ ಎಂದು ತಿಳಿಸಿದರು.
|