ಕೆಲವು ಸಮಯಗಳ ಹಿಂದೆ ಬೀದಿನಾಯಿಗಳ ಕಾಟದಿಂದ ಕಂಗೆಟ್ಟಿದ್ದ ರಾಜಧಾನಿ ನಗರದಲ್ಲಿ ಮತ್ತೆ ಬೀದಿ ನಾಯಿ ಹಾವಳಿ ಮರುಕಳಿಸಿದ್ದು ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನ ತನಕ ಸುಮಾರು ಒಂಭತ್ತು ಮಂದಿಗೆ ನಾಯಿ ಕಡಿತಕ್ಕೊಳಗಾಗಿದ್ದಾರೆ.
ನಗರದ ವಿದ್ಯಾರಣ್ಯಪುರದ ಸಪ್ತಗಿರಿ ಲೇ ಔಟ್ನಲ್ಲಿ ನಾಯಿಕಾಟ ಮರುಕಳಿಸಿದ್ದು, ನಾಯಿಕಡಿತಕ್ಕೊಳಗಾದ ಬಲಿಪಶುಗಳು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಎರಡು ತಿಂಗಳ ಹಿಂದಷ್ಟೆ ಈ ಪ್ರದೇಶದ ಜನತೆ ಬೀದಿನಾಯಿ ಕಡಿತದ ತೊಂದರೆಗೊಳಗಾಗಿದ್ದರು.
ಬಿಬಿಎಂಪಿ ಅಧಿಕಾರಿಗಳಿಗೆ ಈ ಕುರಿತು ದೂರು ಸಲ್ಲಿಸಿದರೂ, ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಇಲ್ಲಿನ ನಿವಾಸಿಗಳು ಪಾಲಿಕೆಯ ಕ್ರಮಕ್ಕೆ ಕಾಯದೆ, ತಮ್ಮ ಸುರಕ್ಷೆಯ ಹಿನ್ನೆಲೆಯಲ್ಲಿ ತಾವೇ ಕಾಟಕೊಡುವ ನಾಯಿಗಳನ್ನು ಕೊಂದುಹಾಕಿದ್ದಾರೆ.
ನಾಯಿಕಾಟ ಮರುಕಳಿಸಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿರುವ ಪಾಲಿಕೆ ಅಧಿಕಾರಿಗಳು ನಾಯಿಹಿಡಿಯುವ ಕಾರ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ.
|