ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳ ಮೇಲೆ ಸೋಮವಾರ ಕಿಡಿಕಾರಿದರು. ಮಾತಿನ ಛಾಟಿ ಬೀಸಿದ ಅವರು ಅಧಿಕಾರಿಗಳ ಬೇಜವಾಬ್ದಾರಿ ಧೋರಣೆ ಬಗ್ಗೆ ಕಿಡಿಕಾರಿದರು. ಅರ್ಧ ಗಂಟೆ ತಡವಾಗಿ ಕಚೇರಿಗೆ ಬರುವ ಅಧಿಕಾರಿಗಳು ಬೇಗನೆ ಮನೆಗೆ ತೆರಳುತ್ತಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರು ಮತ್ತು ಅಧಿಕಾರಿಗಳು ಜನಹಿತ ಕಡೆಗಣಿಸುತ್ತಿದ್ದಾರೆ. ಯೋಜನೆಗಳ ಲಾಭ ಪಡೆಯಲು ಮನೆ ಬಾಗಿಲಿಗೆ ಕೈ ಒಡ್ಡಿ ಬರುವ ಬಡ ಜನರನ್ನು ಜನಪ್ರತಿನಿಧಿಗಳು ಹೇಗೆ ನಡೆಸಿಕೊಳ್ಳುತ್ತಾರೆ? ಬಡ ಕುಟುಂಬದಿಂದ ಬಂದಿರುವ ಅಧಿಕಾರಿಗಳು ಅವರೊಂದಿಗೆ ಯಾವ ರೀತಿ ವರ್ತಿಸುತ್ತಾರೆ? ಇದಕ್ಕೆಲ್ಲ ಕೊನೆ ಯಾವಾಗ? ಬಡವರಿಗೆ ನೆಮ್ಮದಿ ಇಲ್ಲ ಎಂದಾದರೆ, ಅವರು ಲಂಚದ ಮೂಲಕವೇ ಕೆಲಸ ಮಾಡಿಸಿಕೊಳ್ಳುವ ಸ್ಥಿತಿ ಇದ್ದರೆ ನಾವು ಇದ್ದೇನು ಪ್ರಯೋಜನ ಎಂದು ಪ್ರಶ್ನಿಸಿದರು.
ಅಭಿವೃದ್ದಿಗೆ ಹಣದ ಕೊರತೆ ಇಲ್ಲ. ಆದರೆ ಬಿಡುಗಡೆಯಾಗುವ ಪ್ರತಿ 100 ರೂ.ಗಳಲ್ಲಿ ಅರ್ಧದಷ್ಟು ಮಾತ್ರ ಬಳಕೆಯಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಗುಣಮಟ್ಟದ ಕಾಮಗಾರಿಗಳು ಅಪರೂಪ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನ ಪ್ರತಿನಿಧಿಗಳ ಬಗ್ಗೆ ಜನ ವಿಶ್ವಾಸ ವಿಶ್ವಾಸ ಕಳೆದುಕೊಳ್ಳುತ್ತಿರುವುದು ಅಭಿವೃದ್ದಿಗೆ ಮಾರಕ. ಕ್ಷೇತ್ರದಲ್ಲಿ ಅಭಿವೃದ್ದಿಯ ವೇಗ ಹೆಚ್ಚಿಸುವುದೆಂದರೆ ಜೊತೆಗೆ ಭ್ರಷ್ಟಾಚಾರ ನಿರ್ಮೂಲನೆಗೆ ಗಮನ ಕೊಡಿ ಎಂದು ಅವರು ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಶಾಸಕರಿಗೆ ಹೆಚ್ಚಿನ ಅಧಿಕಾರ ನೀಡಲು ಸಿದ್ಧ. ವಿಧಾನ ಮಂಡಲದಲ್ಲಿ ಆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. |