ಅಮೆರಿಕಾದ ಸ್ಯಾಜಿನಾವ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿರುವುದರಿಂದ ಸಾರ್ವಜನಿಕ ಜೀವನದಲ್ಲಿ ತಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅಮೆರಿಕಾ ಪ್ರವಾಸದಿಂದ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮಗೆ ವಿಶ್ವಾವಿದ್ಯಾಲಯವು ನೀಡಿದ ಗೌರವ ರಾಜ್ಯದ ಐದೂವರೆ ಕೋಟಿ ಜನತೆಗೆ ನೀಡಿದ ಗೌರವವಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕಾಕ್ಕೆ ಹೋಲಿಸಿದರೆ ರಾಜ್ಯದ ಪ್ರಗತಿ ಏನೂ ಸಾಲದು. ಅಮೆರಿಕಾ ರೀತಿಯಲ್ಲಿ ರಾಜ್ಯವನ್ನು ಅಭಿವೃದ್ಧಿ ಪಡಿಸುವತ್ತ ಸರ್ಕಾರವು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಉಪಚುನಾವಣೆ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭಾರಿಸುವುದು ಖಚಿತ. ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡೆಸಿದ ದುರಾಡಳಿತವೇ ಬಿಜೆಪಿಗೆ ಚುನಾವಣೆಯಲ್ಲಿ ವರದಾನವಾಗಲಿದೆ ಎಂದು ಭವಿಷ್ಯ ನುಡಿದರು.
ಅಧಿಕಾರದ ಆಸೆಗಾಗಿ ಶಾಸಕರು ರಾಜಿನಾಮೆ ನೀಡಿ ಬಿಜೆಪಿ ಸೇರಿಲ್ಲ. ಬದಲಾಗಿ ರಾಜ್ಯದಲ್ಲಿ ಸ್ಥಿರ ಸರ್ಕಾರ ಸ್ಥಾಪನೆಯಾಗಲಿ ಎಂಬ ಉದ್ದೇಶದಿಂದ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಕುರಿತಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಆರೋಪಗಳಿಗೆ ಉಪಚುನಾವಣೆಯಲ್ಲಿ ಉತ್ತರ ದೊರೆಯಲಿದೆ ಎಂದು ತಿಳಿಸಿದ್ದಾರೆ.
|