ಅಕ್ಷಯ ಪಾತ್ರೆ ಬಿಸಿಯೂಟ ಯೋಜನೆಯನ್ನು ಪ್ರಶಂಸಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ, ಇದು ಎಲ್ಲಾ ರಾಷ್ಟ್ರಗಳಿಗೂ ಮಾದರಿ ಎಂದು ಹೇಳಿದ್ದಾರೆ.ತನ್ನ ಎಡೆಬಿಡದ ಕಾರ್ಯಕ್ರಮಗಳ ನಡುವೆಯೂ ಒಂದಿಷ್ಟು ಬಿಡುವು ಮಾಡಿಕೊಂಡಿರುವ ಒಬಾಮ, ಅಕ್ಷಯ ಪಾತ್ರೆಯ ವಿಚಾರ ಕೇಳಿದ ಬಳಿಕ, ಭಾರತದ ಈ ಯೋಜನೆಯನ್ನು ಹೊಗಳಲು ಒಂದಿಷ್ಟು ಪುರುಸೊತ್ತು ಮಾಡಿಕೊಂಡಿದ್ದಾರೆ.ಈ ಯೋಜನೆಯು ಮೂಲಕ ಪ್ರತಿದಿನ ಸರಿಸುಮಾರು ಒಂದು ಮಿಲಿಯ ಶಾಲಾಮಕ್ಕಳಿಗೆ ಮಧ್ಯಾಹ್ನದ ಊಟ ನೀಡಲಾಗುತ್ತಿದೆ ಎಂಬ ವಿಚಾರ ಒಬಾಮ ಮೇಲೆ ಪ್ರಭಾವ ಬೀರಿದ್ದು, ತಕ್ಷಣವೇ ಅಕ್ಷಯಪಾತ್ರೆ ಯೋಜನೆಗೆ ಅಭಿನಂದನೆ ಸಲ್ಲಿಸುವ ಪತ್ರವನ್ನು ಕಳುಹಿಸಿದ್ದಾರೆ.ಬೋಸ್ಟನ್‌ನಲ್ಲಿರುವ ಅಕ್ಷಯ ಪಾತ್ರೆ ಕಚೇರಿಗೆ ತನ್ನ ಸಹಿಇರುವ ಪತ್ರ ಕಳುಹಿಸಿರುವ ಒಬಾಮ, ಅಕ್ಷಯ ಪಾತ್ರೆ ಯೋಜನೆಯನ್ನು ಶ್ಲಾಘಿಸಿದ್ದು, "ಕೆಲವು ವರ್ಷಗಳಲ್ಲೇ 1,500 ಶಾಲಾಮಕ್ಕಳಿಂದ ಒಂದು ಮಿಲಿಯ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವ ಈ ನಿಮ್ಮ ಆವಿಷ್ಕಾರಿಕ ಕ್ರಮವು ಜನತೆ ಒಟ್ಟಾಗಿ ಕಾರ್ಯವೆಸಗಿದಾಗ ಏನು ಸಾಧಿಸಬಹುದು ಎಂಬುದರ ಪ್ರಾತ್ಯಕ್ಷಿಕೆಯಾಗಿದೆ" ಎಂದು ಹೇಳಿದ್ದಾರೆ.ಒಬಾಮ ಅವರ ಈ ಸಂದೇಶದಿಂದ ಆನಂದ ತುಂದಿಲಾಗಿರುವ ಅಕ್ಷಯ ಪಾತ್ರೆ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ್ ಅವರು, "ಒಂದು ದಿನ ನಮ್ಮ ದೊಡ್ಡ ಅಡುಗೆ ಮನೆಯನ್ನು ಒಬಾಮ ಅವರಿಗೆ ತೋರಿಸಲು ಸಾಧ್ಯವಾಗಬಹುದು ಮತ್ತು ರಾಷ್ಟ್ರದಲ್ಲಿ ಪರಿವರ್ತನೆಗಾಗಿ ನಮ್ಮ ಮಕ್ಕಳ ಏಳಿಗೆಗಾಗಿ ನಮ್ಮ ಸರ್ಕಾರಗಳು ಮತ್ತು ನಾಗರಿಕ ಸಮಾಜವು ಒಟ್ಟಾಗಿ ಹೇಗೆ ಕಾರ್ಯವೆಸಗುತ್ತದೆ ಎಂಬುದನ್ನು ತೋರಿಸುವ ದಿನ ಬರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.ಕರ್ನಾಟಕದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಮಂಗಳೂರು, ಮೈಸೂರು, ರಾಜಸ್ಥಾನದ ಜೈಪುರ, ನಾತಡ್ವಾರ ಮತ್ತು ಬರಾನ್, ಉತ್ತರಪ್ರದೇಶದ ಬೃಂದಾವನ್ ಮತ್ತು ಮಥುರಾ ಜಿಲ್ಲೆಗಳು, ಒರಿಸ್ಸಾದ ಪುರಿ ಮತ್ತು ನಯಾಗರ ಜಿಲ್ಲೆಗಳು, ಗುಜರಾತಿನ ಗಾಂಧಿನಗರ ಮತ್ತು ಅಹಮದಾಬಾದ್ ಮತ್ತು ಆಂಧ್ರ ಪ್ರದೇಶದ ಹೈದರಾಬಾದ್ ಮತ್ತು ವಿಶಾಕಪಟ್ಟಣ ಜಿಲ್ಲೆಗಳ ಸುಮಾರು 5,700 ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಅಂಗನವಾಡಿ ಶಾಲೆಗಳಲ್ಲಿ ಅಕ್ಷಯ ಪಾತ್ರೆ ಯೋಜನೆಯಡಿ ಪ್ರತಿದಿನ 9,73,147 ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ. |