ಎಂಟು ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯನವರೇ ಭಾಗವಹಿಸದಿರುವುದು ಪಕ್ಷಕ್ಕೆ ಇರಿಸುಮುರಿಸುಂಟುಮಾಡಿದೆ.ಉಪಚುನಾವಣೆಗೆ ಇನ್ನು ಕೇವಲ 10 ದಿನಗಳು ಬಾಕಿ ಉಳಿದಿವೆ. ಆದರೂ ಸಿದ್ದರಾಮಯ್ಯನವರು ಇನ್ನೂ ಕೂಡ ಪ್ರಚಾರ ಕಣಕ್ಕೆ ಇಳಿದಿಲ್ಲ. ಅಗತ್ಯ ಬಿದ್ದಲ್ಲಿ ಪ್ರಚಾರಕ್ಕೆ ಸಿದ್ದ ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದರೂ, ಇದುವರೆಗೆ ಪ್ರಚಾರ ಪ್ರಾರಂಭಿಸದಿರುವುದು ಪಕ್ಷದ ನಾಯಕರಿಗೆ ಕಸಿವಿಸಿ ಉಂಟು ಮಾಡಿದೆ.ಅಲ್ಲದೆ, ಈ ಬಾರಿಯ ಉಪಚುನಾವಣೆ ಮೂರು ಪಕ್ಷಗಳಿಗೂ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರೇ ಪ್ರಚಾರ ಕಣಕ್ಕಿಳಿಯದಿರುವುದು ಇತರ ಪಕ್ಷಗಳ ಅಪಹಾಸ್ಯಕ್ಕೂ ಕಾರಣವಾಗಿದೆ.ಈ ನಡುವೆ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಸಿದ್ದರಾಮಯ್ಯನವರನ್ನು ನಾಯಕರು ಮನವೊಲಿಸುವ ಕೆಲಸ ಮುಂದುವರೆಸಿದ್ದಾರೆ. ಆದರೆ ಕಾಂಗ್ರೆಸ್ ಸೇರಿದಾಗಿನಿಂದ ಕೇವಲ ಸ್ಥಾನಮಾನಗಳಿಗಾಗಿ ಹೋರಾಟ ನಡೆಸಿದ ಸಿದ್ದರಾಮಯ್ಯ ಪಕ್ಷ ಸಂಘಟನೆಯನ್ನು ನಿರ್ಲಕ್ಷಿಸಿದರು ಎಂಬುದು ಇನ್ನೊಂದು ಬಣದ ಕಾಂಗ್ರೆಸ್ ನಾಯಕರ ಆರೋಪ. ಈ ನಿಟ್ಟಿನಲ್ಲಿ ಪ್ರಚಾರ ಕಣದಿಂದ ಹಿಂದೆ ಸರಿದಿರುವ ಸಿದ್ದರಾಮಯ್ಯರ ಮುಂದಿನ ರಾಜಕೀಯ ನಿಲುವಿನ ಬಗ್ಗೆ ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. |