ಎಂಟು ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆ ಈಗ ಪ್ರಚಾರದ ರಂಗು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪ್ರಚಾರಕ್ಕೆ ಕಳೆಗಟ್ಟತೊಡಗಿದೆ. ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಚುನಾವಣೆಯಾಗಿರುವ ಹಿನ್ನೆಲೆಯಲ್ಲಿ ನಾಯಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಮಂಗಳವಾರ ಮದ್ದೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಸಿ. ತಮ್ಮಣ್ಣ ಪರ ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿಗಳು, ತಮ್ಮ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದರು. ಇಂದಿನಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಖ್ಯಮಂತ್ರಿಗಳು ಚುನಾವಣಾ ಪ್ರಚಾರವನ್ನು ಕೈಗೊಳ್ಳಲಿದ್ದಾರೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಸೇರಿದಂತೆ ಹಲವು ಸಚಿವರು, ನಾಯಕರು, ಶಾಸಕರು ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ.
ಈ ನಡುವೆ ಚುನಾವಣಾ ಅಖಾಡಕ್ಕಿಳಿದಿರುವ ಕಾಂಗ್ರೆಸ್ ಕೂಡ ಭರ್ಜರಿಯ ಪ್ರಚಾರವನ್ನು ಪ್ರಾರಂಭಿಸಿದೆ. ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಾಗಲೇ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಇದೇ ವೇಳೆ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಧುಗಿರಿ, ತುರುವೇಕೆರೆಗಳಲ್ಲಿ ಈಗಾಗಲೇ ಪ್ರಚಾರ ಸಭೆ ಮುಗಿಸಿದ್ದಾರೆ. |