ಪುತ್ರನ ಮೇಲಿನ ಪ್ರೀತಿಯಿಂದ ಕಾರವಾರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್ ಅವರಿಗೆ ಕಾಂಗ್ರೆಸ್ ನೊಟೀಸ್ ನೀಡಿದೆ.
"ಏಳು ತಿಂಗಳಿನಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ನಿಮ್ಮನ್ನು ಪಕ್ಷದಿಂದ ಉಚ್ಚಾಟಿಸಬಾರದೇಕೆ" ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ನೊಟೀಸ್‌ನಲ್ಲಿ ಪ್ರಶ್ನಿಸಿದ್ದಾರೆ. ಉತ್ತರ ನೀಡಲು ಏಳು ದಿನಗಳ ಗಡುವು ನೀಡಲಾಗಿದೆ.
ಶುಭಲತಾ ಪುತ್ರ, ಸಚಿವ ಆನಂದ ಅಸ್ನೋಟಿಕರ್ ಕಾರವಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಪ್ರಮಾಣಪತ್ರದಲ್ಲಿನ ಆಸ್ತಿ ವಿವರದ ಗೊಂದಲದಿಂದ ಮಗನ ನಾಮಪತ್ರ ತಿರಸ್ಕೃತವಾಗುವ ಅನುಮಾನದಲ್ಲಿ ನಾಮಪತ್ರ ಸಲ್ಲಿಸಿದ ಶುಭಲತಾ, ನಾಮಪತ್ರ ಪರೀಶೀಲನೆ ಬಳಿಕ ಉಮೇದುವಾರಿಕೆ ವಾಪಸ್ ಪಡೆದಿದ್ದರು. ಮಗನ ಜತೆಗೆ ಗುರುತಿಸಬೇಕೆಂದರೆ ಪಕ್ಷ ತ್ಯಜಿಸಲಿ, ಪಕ್ಷದಲ್ಲಿ ನಿಷ್ಠೆ ಇದ್ದರೆ ಅಧಿಕೃತ ಅಭ್ಯರ್ಥಿ ಪರ ಪ್ರಚಾರ ನಡೆಸಲಿ ಎಂದು ಕಾಂಗ್ರೆಸ್ ಸೂಚಿಸಿದೆ.
|