ಪಕ್ಷಾಂತರದ ಹೆಸರಿನಲ್ಲಿ ಬಿಜೆಪಿಯನ್ನು ಟೀಕಿಸುವ ಹಕ್ಕು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆಯವರಿಗೆ ಇಲ್ಲ ಎಂದು ಬಿಜೆಪಿ ವಕ್ತಾರ ಧನಂಜಯ ಕುಮಾರ್ ತಿಳಿಸಿದ್ದಾರೆ.
ಪಕ್ಷಾಂತರಿಗಳನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ದೇಶಪಾಂಡೆಯವರು ಪಾಠ ಮಾಡುತ್ತಿದ್ದಾರೆ. ಆದರೆ ಅವರು ತಮ್ಮ ಹಿಂದಿನ ದಿನಗಳನ್ನು ಒಮ್ಮೆ ಮೆಲುಕು ಹಾಕಿಕೊಂಡರೆ ಅವರಿಗೆ ಪಾಠ ಹೇಳುವ ನೈತಿಕ ಹಕ್ಕು ಇಲ್ಲ. ದೇಶಪಾಂಡೆಯವರೂ ಈ ಹಿಂದೆ ಪಕ್ಷ ಬದಲಿಸಿದ್ದು, ಈಗಿನ ಪ್ರಕರಣ ಬೇರೆಯದೇ ರೀತಿ ಇದೆ. ಬಿಜೆಪಿ ಸೇರಿರುವ ಶಾಸಕರು ಮತ್ತೆ ಜನಾದೇಶ ಪಡೆಯುತ್ತಿರುವುದರಿಂದ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ ಎಂದು ಸಮರ್ಥಿಸಿಕೊಂಡರು.
ಉಪಚುನಾವಣೆಯಲ್ಲಿ ಪಕ್ಷದ ಪರವಾಗಿ ಬಿರುಸಿನ ಪ್ರಚಾರ ನಡೆಯುತ್ತಿದೆ. ಎಲ್ಲಾ ಎಂಟೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಖಚಿತವಾಗಿದೆ. ಈ ಚುನಾವಣೆಯಿಂದ ರಾಜ್ಯದ ಆಡಳಿತದಲ್ಲಿ ಬದಲಾವಣೆ ಆಗುತ್ತದೆ ಎನ್ನುವ ಜೆಡಿಎಸ್, ಕಾಂಗ್ರೆಸ್ ನಾಯಕರು ಅದು ಹೇಗೆ ಎನ್ನುವುದರ ಬಗ್ಗೆ ಜನತಗೆ ವಿವರ ನೀಡಬೇಕಿದೆ ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಆಯೋಗಕ್ಕೆ ಸಿಕ್ಕಿರುವ 20 ಲಕ್ಷ ರೂ.ಗಳನ್ನು ಈ ಹಣ ತಮ್ಮದು ಎಂದು ಹೇಳಿರುವ ದೇವೇಗೌಡರು, ಕ್ಷೇತ್ರಕ್ಕೆ ಹಣ ಕೊಂಡುಯ್ಯುವಾಗ ಆಯೋಗದ ಗಮನಕ್ಕೆ ತರಬೇಕಿತ್ತು. ಆದ್ದರಿಂದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.
|