ರಾಜ್ಯ ವಿಧಾನಸಭೆಯ 8 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಆಡಳಿತ ಮತ್ತು ಪ್ರತಿಪಕ್ಷಗಳು ನಾನಾ ತಂತ್ರಗಳನ್ನು ಹೆಣೆಯುತ್ತಿವೆ. ಆದರೆ ಮಂಡ್ಯ ಸಂಸದ ಅಂಬರೀಷ್ ಅವರು ಮದ್ದೂರು ಚುನಾವಣಾ ಪ್ರಚಾರದಿಂದ ದೂರವೇ ಉಳಿದಿದ್ದಾರೆ. ಇದು ಮಂಡ್ಯ ಜಿಲ್ಲಾ ಕಾಂಗ್ರೆಸ್ಸಿಗರನ್ನು ಕಾಡುತ್ತಿರುವ ಪ್ರಶ್ನೆ. ಕಳೆದ ವಿಧಾನಸಭೆಯಲ್ಲಿ ಶ್ರೀರಂಗಪಟ್ಟಣದಿಂದ ಸ್ಪರ್ಧಿಸಿದ್ದ ಅಂಬರೀಷ್ ಸೋಲುಂಡಿದ್ದರು. ನಂತರ ಯಾರಿಗೂ ಕಾಣಿಸದೆ ಇದ್ದ ಅಂಬರೀಷ್, ಪಕ್ಷದ ಚಟುವಟಿಕೆಗಳಿಂದ ದೂರವುಳಿದಿದ್ದರು. ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ವಿರೋಧಿಸಿ ಕೇಂದ್ರ ಸಚಿವ ಸ್ಥಾನ ಹಾಗೂ ಮಂಡ್ಯ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿದ ಜನಸಂಪರ್ಕದಿಂದ ದೂರವುಳಿದಿರುವ ಅಂಬರೀಷ್ ಮತ್ತೆ ಜನರನ್ನು ಸಂಧಿಸುವ ನಿಟ್ಟಿನಲ್ಲಿ ಮುಂದಾಗಿಲ್ಲ. ಅತ್ತ ರಾಜೀನಾಮೆಯೂ ಅಂಗೀಕಾರವಾಗದೆ, ಇತ್ತ ಜನರನ್ನೂ ಸಂಪರ್ಕಿಸದೆ ದ್ವಿಮುಖ ಧೋರಣೆ ಅನುಸರಿಸುತ್ತಾ ಬಂದ ಅಂಬರೀಷ್ ಈಗ ಚುನಾವಣಾ ಕಣದಿಂದಲೂ ದೂರ ಉಳಿದಿರುವುದು ಹಲವರ ಹುಬ್ಬೇರಿಸಿದೆ. ಯುಪಿಎ ಸರ್ಕಾರದ ವಿಶ್ವಾಸ ಮತ ಯಾಚನೆ ವೇಳೆ ಪಕ್ಷದ ಹೈಕಮಾಂಡ್ ಸೂಚನೆಯಂತೆ ಲೋಕಸಭೆಗೆ ಹಾಜರಾಗಿ ಮತ ಚಲಾಯಿಸಿದ್ದ ಅಂಬರೀಷ್ ನಂತರ ಪಕ್ಷದ ಯಾವುದೇ ವೇದಿಕೆಯಲ್ಲೂ ಕಾಣಸಿಕೊಂಡಿಲ್ಲ. ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಮತ್ತು ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅಧಿಕಾರ ವಹಿಸಿಕೊಂಡ ವೇಳೆ ದೊಡ್ಡಬಳ್ಳಾಪುರದಲ್ಲಿ ನಡೆಸಲಾಗಿರುವ ಬೃಹತ್ ಸಮಾವೇಶ, ಅಥವಾ ಯಾವುದೇ ಸಭೆ ಸಮಾರಂಭದಲ್ಲೂ ಅವರ ಹಾಜರಿ ಇಲ್ಲ. ತವರು ಜಿಲ್ಲೆ ಮಂಡ್ಯದ ವಿಧಾನಸಭಾ ಕ್ಷೇತ್ರವಾದ ಮದ್ದೂರಿನಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಾದರೂ ಅವರು ಸಕ್ರಿಯವಾಗಿ ತೊಡಗಿಸಿಕೊಳ್ಳುವರೆಂಬ ಕಾರ್ಯಕರ್ತರ ನೀರೀಕ್ಷೆಯೂ ಹುಸಿಯಾಗಿದೆ.ಮದ್ದೂರಿನಲ್ಲಿ ಕಾಂಗ್ರೆಸ್ನಿಂದ ಎಸ್.ಎಂ.ಕೃಷ್ಣ ಅವರ ಸಹೋದರನ ಪುತ್ರ ಗುರುಚರಣ್ ಸ್ಪರ್ಧಿಸಿದ್ದು, ಕೃಷ್ಣ ಈಗಾಗಲೇ ಎರಡು ಬಾರಿ ಭೇಟಿ ನೀಡಿರುವುದು ಸ್ಪಲ್ಪ ಸಮಾಧಾನ ತರಿಸಿದೆ. ಜಿಲ್ಲೆಯ ಮುಖಂಡರನ್ನು ಭೇಟಿಮಾಡಿರುವ ಕೃಷ್ಣ, ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಕೋರಿಕೊಂಡಿದ್ದಾರೆ. ಮತ್ತೊಬ್ಬ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರೂ ಪ್ರಚಾರಕ್ಕೆ ಬರಲು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಜೊತೆಗೆ ಅಂಬರೀಷ್ ಮೌನ ಕಾಂಗ್ರೆಸ್ಸಿಗರನ್ನು ಚಿಂತೆಗೀಡುಮಾಡಿದೆ. |