ಬಳ್ಳಾರಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಗಡಿ ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ನಷ್ಟ ಉಂಟುಮಾಡುತ್ತಿರುವ ಗಣಿರೆಡ್ಡಿ ಸಹೋದರರನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣವೇ ಸಚಿವಸಂಪುಟದಿಂದ ವಜಾಗೊಳಿಸಬೇಕೆಂದು ತುಮಟಿ ಕಬ್ಬಿಣ ಮತ್ತು ಅದಿರು ಕಂಪನಿ ಮಾಲಿಕ ಟಪಾಲು ಗಣೇಶ್ ಒತ್ತಾಯಿಸಿದ್ದಾರೆ.
"ಕರ್ನಾಟಕದ ಗಡಿ ಭಾಗದಲ್ಲಿರುವ ತುಮಟಿ, ಸಿದ್ದಾಪುರ, ಹಲಕುಂದಿ ಮತ್ತು ಹೋಬಳಾಪುರ ಪ್ರದೇಶವನ್ನು ಭೂನಕ್ಷೆಯಲ್ಲಿ ನೆರೆಯ ಆಂಧ್ರಪ್ರದೇಶದ ವ್ಯಾಪ್ತಿಯಲ್ಲಿ ಗುರುತಿಸಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ದಿನಕ್ಕೆ 10 ಸಾವಿರ ಟನ್ ಅದಿರು ಸಾಗಣಿಕೆಯಾಗುತ್ತಿದ್ದು, ಇಲ್ಲಿನ ಅರಣ್ಯಾಧಿಕಾರಿಗಳು ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಈ ಗಣಿಗಾರಿಕೆಯಿಂದ ಬಂದ ಹಣದಲ್ಲಿ ಚುನಾವಣಾ ವೆಚ್ಚಕ್ಕೂ ಪಾಲು ಹರಿದುಹೋಗುತ್ತಿದೆ" ಎಂದೂ ಅವರು ಆರೋಪಿಸಿದರು.
"ಬಳ್ಳಾರಿ ಗಣಿರೆಡ್ಡಿಗಳ ಕಪಿಮುಷ್ಠಿಯಲ್ಲಿರುವ ಯಡಿಯೂರಪ್ಪ ಗಣಿ ಲೂಟಿ ಕಾರ್ಯಕ್ಕೆ ಸಂಪೂರ್ಣ ರಕ್ಷಣೆ ಒದಗಿಸಿದ್ದಾರೆ. ನಿರಂತರ ಸಂಪತ್ತು ಲೂಟಿಯಾಗುತ್ತಿದ್ದರೂ ಮುಖ್ಯಮಂತ್ರಿಗಳು ನಿಸ್ಸಾಹಾಯಕರಾಗಿದ್ದಾರೆ" ಎಂದವರು ದೂರಿದ್ದಾರೆ.
"ಗಣಿಗಾರಿಕೆ ಪರವಾನಿಗೆ ತೆಗದುಕೊಳ್ಳದೆ ಈ ಗಡಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ರೆಡ್ಡಿ ಸಹೋದರರ ಮೇಲೆ ಯಾರಾದರೂ ಠಾಣೆಯಲ್ಲಿ ದೂರು ನೀಡಿದರೆ ಅದೂ ಕೂಡ ದಾಖಲಾಗುವುದಿಲ್ಲ. ಜಿಲ್ಲಾಡಳಿತ ಗಮನಕ್ಕೆ ಇದು ಬಂದಿದ್ದರೂ ಸಹ ಮಂತ್ರಿಗಳ ಒತ್ತಡಕ್ಕೆ ಮಣಿದಿರುವ ಅವರು ಮೂಕ ಪ್ರೇಕ್ಷಕರಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ದೂರು ನೀಡಿದವರ ಮೇಲೆ ರೆಡ್ಡಿ ಸಹೋದರರು ಹಲ್ಲೆ ನಡೆಸಲು ಮುಂದಾಗುತ್ತಾರೆ. ನನ್ನ ಹಾಗೂ 84 ವರ್ಷದ ನನ್ನ ತಂದೆಯವರ ಮೇಲೆ ದೂರು ದಾಖಲಿಸಿದ್ದಾರೆ" ಎಂದು ಟಪಾಲು ಗಣೇಶ್ ಗಂಭೀರ ಆರೋಪ ಮಾಡಿದ್ದಾರೆ. |