ಭಯೋತ್ಪಾದನೆ ಪಿಡುಗನ್ನು ಸಮರ್ಥವಾಗಿ ಎದುರಿಸಬೆಕಾದರೆ, ಪೊಲೀಸ್ ಕಾಯ್ದೆಗೆ ಸಮಗ್ರ ತಿದ್ದುಪಡಿ ಅಗತ್ಯವಿದೆ ಎಂದು ಪೊಲೀಸ್ ಮಹಾನಿರ್ದೇಶಕ ಶ್ರೀಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಮೇಲೆ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಗೃಹರಕ್ಷಕ ದಳ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ, ಐಆರ್ಡಿಸಿ, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ನಗರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾನವ ನಿರ್ಮಿತ ಕೃತಕ ವಿಪತ್ತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಂಸತ್ ಮೇಲಿನ ದಾಳಿಯಲ್ಲಿ ನಿಷೇಧಿತ ದೀನ್ದಾರ್ ಅಂಜುಮಾನ್ ಸಂಘಟನೆ ಕೈವಾಡವಿರುವುದು ಸ್ಪಷ್ಟವಾಗಿದೆ. ಹಾಗೂ ಮುಂಬೈ ದಾಳಿಗೆ ಲಷ್ಕರೆ-ಎ-ತೊಯ್ಬಾ ಸಂಘಟನೆಯ ಬೆಂಬಲವಿರುವುದು ಬಹಿರಂಗಗೊಂಡಿದೆ. ಪಾಕಿಸ್ತಾನದ ಮೇಲೆ ಒತ್ತಡ ತಂದು ಈ ಸಂಘಟನೆಗಳ ಮುಖಂಡರನ್ನು ಭಾರತದ ವಶಕ್ಕೆ ತೆಗೆದುಕೊಳ್ಳಬೇಕು ಎಂದರು.
ಭಯೋತ್ಪಾದನೆಯಲ್ಲಿ ಭಾಗಿಯಾದವರನ್ನು ನಾವು ಬಂಧಿಸುತ್ತಿದ್ದೇವೆಯೇ ಹೊರತು ಅವರಿಗೆ ಯಾವುದೇ ಉಗ್ರ ಶಿಕ್ಷೆ ವಿಧಿಸಿಲ್ಲ ಎಂದು ವಿಷಾದಿಸಿದ ಶ್ರೀಕುಮಾರ್, ಕಾನೂನಿನಲ್ಲಿ ತಿದ್ದುಪಡಿ ತಂದು ಪೊಲೀಸ್ ವ್ಯವಸ್ಥೆಗೆ ಬಲ ತುಂಬಬೇಕಿದೆ. ಜೊತೆಗೆ ಜನತೆ ಭಯೋತ್ಪಾದನೆಯನ್ನು ನೋಡುವ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಒಗ್ಗಟ್ಟಾಗಿ ಕೆಲಸ ಮಾಡಿದರೆ ಹಾಗೂ ಭಯೋತ್ಪಾದನೆ ದಾಳಿಯಂತಹ ಪರಿಸ್ಥಿತಿಗಳ ನಿರ್ವಹಣೆಯಲ್ಲಿ ಸುಧಾರಣೆ ತರಬಹುದು. ತುರ್ತುಸೇವಾ ಸಂಸ್ಥೆಗಳು ಪರಸ್ಪರ ಸಹಕಾರದೊಂದಿಗೆ ಮುನ್ನುಗ್ಗಿದಾಗ ಮಾತ್ರ ಭಯೋತ್ಪಾದನೆಯನ್ನು ಮಟ್ಟಹಾಕಬಹುದು ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದರು. |