ಬಸ್ ಪ್ರಯಾಣಿಕರಿಗೊಂದು ಸಿಹಿ ಸುದ್ದಿ. ಇಂಧನ ಬೆಲೆ ಕುಸಿತದ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಇಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗುವ ನೀರೀಕ್ಷೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡುವ ಕುರಿತು ಪರೀಶೀಲನೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ಅರ್. ಅಶೋಕ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ರಾಜ್ಯದ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಿದರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಈ ನಿಟ್ಟಿನಲ್ಲಿ ಚುನಾವಣಾ ಪ್ರಕ್ರಿಯೆಗಳು ಮುಗಿದು ಮುಂದಿನ ತಿಂಗಳಲ್ಲಿ ಈ ಕುರಿತು ಸ್ಪಷ್ಟ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇಂಧನ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಬಸ್ ಪ್ರಯಾಣ ದರದಲ್ಲಿ ಶೇ. 12 ರಿಂದ 20ರಷ್ಟು ಹೆಚ್ಚಳ ಮಾಡಲಾಗಿತ್ತು. ಇದೀಗ ಇಂಧನ ಬೆಲೆ ಇನ್ನಷ್ಟು ಇಳಿದರೆ, ಸಾರಿಗೆ ಸಂಸ್ಥೆ ಪ್ರಯಾಣ ದರದಲ್ಲಿ 10ರಿಂದ 15ರಷ್ಟಯ ಇಳಿಕೆ ಮಾಡುವ ನೀರೀಕ್ಷೆ ಇದೆ. ಅಲ್ಲದೆ, ಮಾಸಿಕ ಬಸ್ ಪಾಸ್ ದರವೂ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. |