ಮಾಜಿ ಸಚಿವ ಎಚ್.ಎನ್. ನಂಜೇಗೌಡ ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಯನಗರದ ತಮ್ಮ ಮನೆಯಲ್ಲಿ ಇಂದು ಬೆಳಗ್ಗೆ ಎದೆ ನೋವು ಕಾಣಿಸಿಕೊಂಡ ನಂತರ ಅವರನ್ನು ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ 1.45ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ ಯಶೋಧಮ್ಮ ಹಾಗೂ ಪುತ್ರ ಕೃಷ್ಣಮೂರ್ತಿ ಅವರನ್ನು ಅಗಲಿದ್ದಾರೆ.ನೇರ ನಡೆ ನುಡಿಯ ವ್ಯಕ್ತಿತ್ವದ ನಂಜೇಗೌಡ, ನೀರಾವರಿ ಸಚಿವರಾಗಿ ಸಲ್ಲಿಸಿದ ಸೇವೆಯಿಂದಾಗಿ ನೀರಾವರಿ ತಜ್ಞರೆಂದೇ ಖ್ಯಾತರಾಗಿದ್ದರು. ಮೂರು ದಿನಗಳ ಹಿಂದೆಯಷ್ಟೇ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರನ್ನು ಭೇಟಿಯಾಗಿ ಮತುಕತೆ ನಡೆಸಿದ್ದ ನಂಜೇಗೌಡರು ಆರೋಗ್ಯವಾಗೇ ಇದ್ದರು. ರಾಜಕೀಯ ಜೀವನ ನಂಜೇಗೌಡರು 1994-99 ರ ಅವಧಿಯಲ್ಲಿ ಬಸವನಗುಡಿ ವಿಧಾನಸಭೆ ಕ್ಷೇತ್ರದಿಂದ ಜನತಾಪಕ್ಷದಿಂದ ಗೆದ್ದು ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದರು. ಅನಂತರ ಬಿಜೆಪಿ ಸೇರಿದ್ದ ನಂಜೇಗೌಡರು ನಂತರ ಜೆಡಿಯು ಸೇರಿದ್ದರು. |