ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಅಧಿಕಾರಿಗಳ ಭ್ರಷ್ಟಾಚಾರದ ಪರಿ ನೋಡಿ ಸ್ವತಃ ಲೋಕಾಯುಕ್ತರೇ ದಂಗಾಗಿಹೋಗಿದ್ದಾರೆ. ಹೌದು ಅಧಿಕಾರಿಗಳ ಸಂಪತ್ತನ್ನು ಕಂಡು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೌಹಾರಿದರು.
ಗುರುವಾರ ರಾಜ್ಯ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿದ 20 ಕೋಟಿಯಷ್ಟು ಅಕ್ರಮ ಸಂಪತ್ತು ಪತ್ತೆಯಾಗಿದೆ. ರಾಜ್ಯಾದ್ಯಂತ ಏಕಕಾಲದಲ್ಲಿ ನಡೆದ ಈ ದಾಳಿಯಲ್ಲಿ, ಲೋಕಾಯುಕ್ತ ತಂಡ 10 ತಿಮಿಂಗಿಲಗಳನ್ನು ಖೆಡ್ಡಕ್ಕೆ ಬೀಳಿಸಿದ್ದು, ಕೋಟ್ಯಂತರ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದೆ.
ಬೆಂಗಳೂರು ಬಿಜಾಪುರ, ಬಾಗಲಕೋಟೆ, ಹಾಸನ, ರಾಮನಗರ, ಜಿಲ್ಲೆಗಳಲ್ಲಿ ಭ್ರಷ್ಟರ ಆಸ್ತಿ-ಪಾಸ್ತಿಗಳನ್ನು ಲೋಕಾಯುಕ್ತ ತಂಡ ಜಾಲಾಡಿದೆ. ಕೆಐಎಡಿಬಿ, ಬಿಬಿಎಂಪಿ, ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಭ್ರಷ್ಟರ ಮನೆಗಳ ಮೇಲೆ ಇಂದು ದಾಳಿ ನಡೆಸಲಾಯಿತು.
ಮುಂಜಾನೆ 5 ಗಂಟೆಯಿಂದಲೇ ದಾಳಿ ಆರಂಭಿಸಿದ ಲೋಕಾಯುಕ್ತ ತಂಡ ಆಯಾ ಜಿಲ್ಲೆಗಳಲ್ಲಿ ಪ್ರತ್ಯೇಕ ತಂಡ ರಚಿಸಿ ಏಕಕಾಲಕ್ಕೆ ಭ್ರಷ್ಟರ ಮನೆ ಕಚೇರಿ ಮೇಲೆ ಲಗ್ಗೆ ಹಾಕಿತು.
ಕೆಐಎಡಿಬಿಯ ಸಿ.ಎಂ. ಚಂದ್ರೇಗೌಡ, ಜಯಶಂಕರ್, ಕೃಷಿ ಇಲಾಖೆಯ ಎಸ್.ಆರ್. ಪಟೇಲಪ್ಪ, ಅರಣ್ಯ ಇಲಾಖೆಯ ಪಿ.ಶ್ರೀನಿವಾಸ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ನಾಗಲಿಂಗಯ್ಯ, ಬಿಬಿಎಂಪಿಯ ಎಂ.ಎಲ್.ದೇವರಾಜು, ಹೇಮಾವತಿ ನಾಲೆಯ ಎಸ್.ಸಿ. ಜಯಚಂದ್ರ, ರಾಜಾನುಕುಂಟೆ ಗ್ರಾಮಪಂಚಾಯ್ತಿಯ ವೀರೇಗೌಡ, ಪೊಲೀಸ್ ಇಲಾಖೆಯ ಬಸವರಾಜ ಆರ್. ಚೌಕಿಮಠ್, ಕೃಷ್ಣಾ ಭಾಗ್ಯ ಜಲನಿಗಮದ ಚಂದ್ರಶೇಖರ್ ವಿ. ಚೌಹಾಣ್ ಬಲೆಗೆ ಬಿದ್ದ ಅಧಿಕಾರಿಗಳು.
|