ಮರು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಆಸ್ತಿ ವಿವರದ ಪ್ರಮಾಣಪತ್ರದಲ್ಲಿ ಕೆಲ ವಿವರಗಳನ್ನು ಮರೆಮಾಚಿದ ಹಿನ್ನೆಲೆಯಲ್ಲಿ ಬಿಜೆಪಿಯ ಆನಂದ್ ಆಸ್ನೋಟಿಕರ್ ಹಾಗೂ ಜೆಡಿಎಸ್‌ನ ದೇವಿದಾಸ್ ಗಾಂವ್ಕರ್ ಅವರಿಗೆ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಈ ಸಂಬಂಧ ಡಿಸೆಂಬರ್ 20ರಂದು ವಿಚಾರಣೆಗೆ ತಮ್ಮ ಕಾರ್ಯಾಲಯದಲ್ಲಿ ಹಾಜರಾಗುವಂತೆ ಚುನಾವಣಾಧಿಕಾರಿ ಸಲ್ಮಾ ಫಹೀಮ್ ನೋಟಿಸ್ ನಲ್ಲಿ ಆದೇಶಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ವಾಪಸ್ ಪಡೆದಿರುವ ವಿಶ್ವಂಬರ ತಳೇಕರ ಸಲ್ಲಿಸಿದ್ದ ಆಕ್ಷೇಪಣೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ದಿಲೀಪ್ ನಾಯ್ಕ್ ಹತ್ಯೆಗೆ ಸಂಬಂಧಿಸಿ ಆನಂದ್ ಅಸ್ನೋಟಿಕರ್ ವಿರುದ್ಧ ವಿವೇಕ ನಾಯಕ್ ಮೊಕದ್ದಮೆ ಹೂಡಿರುವ ವಿಷಯ ಹಾಗೂ ಬಿಣಗಾದಲ್ಲಿರುವ ಜಮೀನೊಂದರ ವಿವರ ನಮೂದಿಸದಿರುವ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕಿರುವುದರಿಂದ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಈ ಮಧ್ಯೆ, ಶುಭಲತಾ ಸಲ್ಲಿಸಿದ್ದ ಅಫಿದಾವಿತ್‌ನಲ್ಲಿ ಚಿತ್ತಾಕುಲ ಗ್ರಾಮದ ಜಮೀನುಗಳ ಮಾಹಿತಿಯನ್ನು ಮರೆಮಾಚಿದ ಬಗ್ಗೆ ದೂರುದಾರರು ಆಕ್ಷೇಪಿಸಿದ್ದು, ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಲಾಗಿದೆ. |