ನೈಸ್ ರಸ್ತೆಯಲ್ಲಿ ಸಂಚರಿಸಲು ವಿಧಿಸುತ್ತಿರುವ ದುಬಾರಿ ಶುಲ್ಕಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್ (ಬಿಎಂಐಸಿ) ಪೆರಿಫೆರಲ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಬುಧವಾರ ಮಧ್ಯರಾತ್ರಿಯಿಂದಲೇ ವಿಧಿಸುತ್ತಿರುವ ದುಬಾರಿ ಶುಲ್ಕದ ವಿರುದ್ಧ ವಾಹನ ಚಾಲಕರು ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದುದು ಕಂಡುಬಂದಿದೆ.
ಸೈಕಲ್ ಮತ್ತು ಆಟೋ ಹೊರತುಪಡಿಸಿ ಉಳಿದೆಲ್ಲಾ ವಾಹನಗಳಿಗೂ ಶುಲ್ಕ ವಿಧಿಸಲಾಗುತ್ತಿದೆ. ಜೊತೆಗೆ ದ್ವಿಚಕ್ರ ವಾಹನ ಸಂಚಾರಕ್ಕೂ ಶುಲ್ಕ ವಿಧಿಸುತ್ತಿರುವುದರಿಂದ ಮಧ್ಯಮ ವರ್ಗದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೂರ್ವಭಾವಿಯಾಗಿ ಯಾವುದೇ ಮಾಹಿತಿ ನೀಡದೇ ರಾತ್ರೋರಾತ್ರಿ ಪ್ರತ್ಯಕ್ಷವಾದ ಶುಲ್ಕಸಂಗ್ರಹಣಾ ಕೊಠಡಿಗಳನ್ನು ಕಂಡು ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ.
ಮಾಗಡಿ ರಸ್ತೆಯ ಟೋಲ್‌ಗೇಟ್ ಬಳಿ ಹಲವು ವಾಹನ ಚಾಲಕರು 'ನೈಸ್' ಸಿಬ್ಬಂದಿ ಜತೆಯಲ್ಲಿ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ವಾಗ್ವಾದ ನಡೆಸಿದರು. ಇನ್ನೂ ಕೆಲವರು ಅನಧಿಕೃತವಾಗಿ ಶುಲ್ಕ ಸಂಗ್ರಹಿಸುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಹೊಸೂರು ರಸ್ತೆಯಿಂದ ತುಮಕೂರು ರಸ್ತೆವರೆಗೆ ಸದ್ಯಕ್ಕೆ ಆರು ವಿವಿಧ ದ್ವಾರಗಳಲ್ಲಿ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ ಸಂಪರ್ಕಿಸುವ ಸ್ಥಳದಲ್ಲಿ ಕೆಲವು ಕಿ.ಮೀ.ನಷ್ಟು ರಸ್ತೆ ಕೆಟ್ಟು ಹೋಗಿದ್ದು ಬಹಳ ಅಧ್ವಾನವಾಗಿದೆ.
ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದು, ವಿವಾದವನ್ನು ಬಗೆಹರಿಸಿಕೊಂಡು ಪೂರ್ಣವಾಗಿ ರಸ್ತೆ ನಿರ್ಮಿಸಿದ ಬಳಿಕ ಶುಲ್ಕ ವಿಧಿಸಬಹುದಿತ್ತು ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ಗುಣಮಟ್ಟದಲ್ಲಿಯೂ ನೈಸ್‌ರಸ್ತೆ ಕಳಪೆಯಾಗಿದೆ. ಭಾರೀವಾಹನ ಸಂಚಾರದಿಂದ ರಸ್ತೆಯಲ್ಲಿ ಗುಂಡಿಬಿದ್ದಿವೆ. ಜೊತೆಗೆ ಜಾನುವಾರುಗಳ ತಿರುಗಾಟ ಹೆಚ್ಚಾಗಿದ್ದು, ನೀರೀಕ್ಷಿತ ಸಮಯದಲ್ಲಿ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ದೂರು ಪ್ರಯಾಣಿಕರದ್ದು. |