ರಾಜ್ಯದ ಸರ್ಕಾರಿ ವಾಹನಗಳಲ್ಲಿ ಸಂಖ್ಯಾ ಫಲಕವನ್ನು ಇಂಗ್ಲಿಷ್ ಜೊತೆ ಕನ್ನಡದಲ್ಲಿಯೂ ಅಳವಡಿಸಲು ಕನ್ನಡ ಅಭಿವೃದ್ದಿ ಪ್ರಾಧಿಕಾರ ಜನವರಿ 1ರ ವರೆಗೆ ಗಡುವು ನೀಡಿದೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಈ ಬಗ್ಗೆ ಮಾಹಿತಿ ನೀಡಿದರು. ಎಲ್ಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಹಾನಗರ ಪಾಲಿಕೆಗಳ ಆಯುಕ್ತರು, ವಿಶ್ವದ್ಯಾನಿಲಯಗಳ ಕುಲಪತಿಗಳಿಗೆ ಪತ್ರ ಬರೆಯಲಾಗಿದೆ. 2000 ನೇ ಸಾಲಿನಿಂದ ಈವರೆಗೆ ಆದೇಶ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಎಲ್ಲ ಸಚಿವರಿಗೂ ಪತ್ರ ಬರೆಯಲಾಗಿದೆ. ಸಹಕಾರ ತೋಟಗಾರಿಕೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಈ ಬಗ್ಗೆ ಪರೀಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಸಾರಿಗೆ ಇಲಾಖೆ ಹಾಗೂ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆಗಳು ಈ ಸಂಬಂಧ 200ರಲ್ಲಿ ಪ್ರತ್ಯೇಕವಾಗಿ ಎರಡು ಆದೇಶ ಹೊರಡಿಸಿವೆ. ಅದರ ಜಾರಿಗೆ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ. ಜ.1ರ ಒಳಗಾಗಿ ಎಲ್ಲ ವಾಹನಗಳಲ್ಲಿ ಕನ್ನಡ ನಾಮಪತ್ರ ಹಾಕದಿದ್ದರೆ, ಸದನದಲ್ಲಿ ವಿಷಯ ಪ್ರಸ್ತಾಪಿಸಲಾಗುವುದು ಎಂದು ಚಂದ್ರು ಎಚ್ಚರಿಸಿದರು. ಅಂಗಡಿ ಫಲಕ ರಾಜ್ಯದ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಕನ್ನಡ ನಾಮಫಲಕ ಅಳವಡಿಸಲು ಜ.1ರ ಗಡುವು ನಿಡಲಾಗಿದೆ. ಈ ಸಂಬಂಧ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಕಾರ್ಯಸಂಸ್ಥೆಗಳ ನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಅದರಂತೆ ಕನ್ನಡ ಭಾಷೆಯಲ್ಲಿ ಮೊದಲು ಎದ್ದು ಕಾಣುವಂತೆ ಬರೆದು ನಂತರ ಯಾವುದೇ ಭಾಷೆಯಲ್ಲಿ ಬರೆಯಬಹುದು. ತಪ್ಪಿದರೆ 10,000 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು. ಎಸ್ಬಿಐ ಅನ್ಯಾಯ ಎಸ್ಬಿಐ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿರುವ ದೂರುಗಳನ್ನ ಪರೀಶೀಲಿಸಲಾಗುವುದು. ವರದಿ ಬಂದ ಬಳಿಕ ಸ್ವತಃ ಬ್ಯಾಂಕ್‌ಗೆ ಭೇಟಿ ನೀಡಿ ಸತ್ಯಾಸತ್ಯತೆ ಪರೀಶೀಲಿಸುವೆ ಎಂದು ಚಂದ್ರು ತಿಳಿಸಿದರು. |