ಜೆಡಿಎಸ್ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಉಪಚುನಾವಣೆ ನಡೆಯುತ್ತಿರುವ ಬೆಳಗಾವಿ ಜಿಲ್ಲೆಯ ಅರಭಾವಿಯಲ್ಲಿ ಚುನಾವಣಾ ಪ್ರಚಾರ ರ‌್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಅಧಿಕಾರ ಹಸ್ತಾಂತರಿಸದೆ ಮಾಡಿದ ದ್ರೋಹವನ್ನು ಮತ್ತೊಮ್ಮೆ ನೆನಪಿಸಿಕೊಂಡರು.20 ತಿಂಗಳು ಮೌನವಾಗಿದ್ದ ನನಗೆ ಅಧಿಕಾರ ಹಸ್ತಾಂತರ ಮಾಡದೇ ಜೆಡಿಎಸ್ ದ್ರೋಹ ಮಾಡಿತು. ರಾಷ್ಟ್ರಪತಿಗಳ ಮುಂದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಬರೆದುಕೊಟ್ಟವರು ನಂತರ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಂತೆ ಮಾಡಿದರು. ಇದಕ್ಕೆ ಮತದಾರರಾದ ನೀವು ತಕ್ಕ ಉತ್ತರ ಕೊಟ್ಟಿದ್ದೀರಿ. ಆದರೆ ಬಹುಮತಕ್ಕೆ ಅಗತ್ಯವಿರುವ ಮೂರು ಸ್ಥಾನಗಳನ್ನು ಪಡೆಯುವುದಕ್ಕಾಗಿ ನಾವು ಮತ್ತೊಮ್ಮೆ ತಮ್ಮ ಬಳಿ ಬಂದಿದ್ದೇವೆ. ದಯವಿಟ್ಟು ಸ್ಥಿರ ಸರ್ಕಾರಕ್ಕಾಗಿ ಮತ ನೀಡಿ ಎಂದು ಮನವಿ ಮಾಡಿದರು." ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಂದೇ ನಾಣ್ಯದ ಮುಖಗಳು ಎಂಬುದು ನಿಮಗೆ ಮನವರಿಕೆಯಾಗಿದೆ. ಬಿಜೆಪಿ ಅಧಿಕಾರದಲ್ಲಿರುವುದು ಈ ಪಕ್ಷಗಳಿಗೆ ಇಷ್ಟವಿಲ್ಲ. ಇದಕ್ಕಾಗಿ ಸರ್ಕಾರ ಬೀಳಿಸಲು ವಾಮಮಾರ್ಗದಲ್ಲಿ ಪ್ರಯತ್ನಪಡುತ್ತಿವೆ. ಆದರೆ ಅದನ್ನು ಸಾಧ್ಯವಾಗಿಸಲು ತಾವು ಬಿಡುವುದಿಲ್ಲ ಎಂಬ ಭರವಸೆ ನನಗಿದೆ" ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ಅಭಿವೃದ್ದಿಗೆ ಕಂಕಣಬದ್ಧವಾಗಿರುವ ಬಿಜೆಪಿಗೆ ಸೇರುವ ಮೂಲಕ ಶಿವನಗೌಡ ನಾಯಕ್ ಉತ್ತಮ ಕೆಲಸ ಮಾಡಿದ್ದಾರೆ. ಹಳ್ಳಿಗಳು ಇಂದು ವೃದ್ದಾಶ್ರಮವಾಗುತ್ತಿದ್ದು, ಗ್ರಾಮೀಣ ಯುವಕ ಯುವತಿಯರು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಇದನ್ನು ತಡೆಯಲು ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನಡೆಸುವ ಮೂಲಕ ಪ್ರಯತ್ನಿಸಲಾಗುವುದು. ಈ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು ರಾಜ್ಯದ ಐದುವರೆ ಕೋಟಿ ಜನಗಳ ಸೇವಕನಂತೆ ಕೆಲಸ ಮಾಡಲು ನಾನು ತಯಾರಿದ್ದೇನೆ ಎಂದು ಘೋಷಿಸಿದರು.ಈ ಬಾರಿ ನಡೆಯುತ್ತಿರುವ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ. ಎಲ್ಲ ಕಡೆಗಳಲ್ಲೂ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಹಳ್ಳಿಗಳಲ್ಲಿ ಜನರು ರಾತ್ರಿ ಒಂದೂವರೆ ಗಂಟೆಯವರೆಗೂ ಕಾದು ಕುಳಿತಿದ್ದಾರೆ. ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸ ತಮಗಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. |