ಕಾಂಗ್ರೆಸ್ ಡಿಸೆಂಬರ್ 27ರಂದು ನಡೆಯಲಿರುವ 8 ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವುದಿಲ್ಲ ಎಂಬ ಅನುಮಾನವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಮಾತನಾಡಿಕ, ಸ್ವತಃ ಮುಖ್ಯಮಂತ್ರಿಗಳೇ ಹಿರಿಯ ಅಧಿಕಾರಿಗಳು ಹಾಗೂ ಮೂವರು ಸಚಿವರೊಂದಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವಾಗ ನ್ಯಾಯಸಮ್ಮತವಾಗಿ ಚುನಾವಣೆ ನಡೆಯಲು ಸಾಧ್ಯವಿಲ್ಲ ಎಂದರು.
ಮುಖ್ಯಮಂತ್ರಿಗಳ ವಿರುದ್ಧ ಆಯೋಗ ಕ್ರಮಕೈಗೊಳ್ಳಲು ಅಧಿಕಾರಿಗಳು ಸಹಕರಿಸುತ್ತಿಲ್ಲ. ಕೇಂದ್ರ ಚುನಾವಣೆ ಆಯೋಗ ಮಧ್ಯ ಪ್ರವೇಶಿಸಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೇಂದ್ರ ಚುನಾವಣಾ ಆಯೋಗ ತಡವಾಗಿ ವೀಕ್ಷಕರನ್ನು ನೇಮಿಸಿದೆ. ಇದು ಬಿಜೆಪಿಗೆ ಪೂರಕವಾಗಲಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಲು ಅಗತ್ಯ ಸಲಹೆಗಳನ್ನು ಕೇಂದ್ರ ಚುನಾವಣಾ ಆಯೋಗವು ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು.
ಕಾಂಗ್ರೆಸ್ ವಕ್ತಾರ ವಿ.ಆರ್. ಸುದರ್ಶನ್ ಮಾತನಾಡಿ, ಚುನಾವಣೆ ನಡೆಯುವ ಸಂದರ್ಭ ಬೆಳಗಾವಿ ಅಧಿವೇಶನ ಘೋಷಣೆ ಮಾಡಲಾಗಿದೆ. ಸಾರಿಗೆ ಸಂಸ್ಥೆ ಉಪಾಧ್ಯಕ್ಷರಾಗಿರುವ ಜಗ್ಗೇಶ್ ತಾಲೂಕಿನವರಿಗೆ ಒಂದು ಸಾವಿರ ಹುದ್ದೆ ನಿಡುವುದಾಗಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಇವೆಲ್ಲವನ್ನು ಗಮನಿಸಿಯೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಚುನಾವಣಾ ಆಯೋಗ ಮೇಲ್ನೋಟಕ್ಕೆ ಪಕ್ಷಪಾತೀ ನಿಲುವು ತಳೆದಿರುವುದು ಸ್ಪಷ್ಟವಾಗಿದೆ. ಎಂದು ಆರೋಪಿಸಿದರು. |