ಗುಲ್ಬರ್ಗಾ ವಿವಿ ಉಪಕುಲಪತಿ ನೇಮಕದಲ್ಲಿ ಅಕ್ರಮ ನಡೆದಿದೆ ಎಂದು ಶಕೀಲ್ ಅಹಮದ್ ಎಂಬುವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ನೇಮಕಾತಿ ವೇಳೆ ಎಲ್ಲ ನಿಯಮಾವಳಿಗಳನ್ನೂ ಗಾಳಿಗೆ ತೂರಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಬೋಧಕೇತರ ಸಿಬ್ಬಂದಿಯನ್ನು ಉಪಕುಲಪತಿಗಳಾಗಿ ನೇಮಕ ಮಾಡಿರುವುದು ನಿಯಮಾವಳಿಯ ಸ್ಪಷ್ಟ ಉಲ್ಲಂಘನೆ. ಪ್ರಕಾಶ್ ಸಿಂಗ್ ತಿವಾರಿ ಅವರನ್ನು ಉಪಕುಲಪತಿಯಾಗಿ ನೇಮಕ ಮಾಡಿ ಒಂದು ವರ್ಷ ಕಳೆದಿದೆ. ಆದರೂ ಈ ಪ್ರಕರಣ ಈಗ ಬೆಳಕಿಗೆ ಬಂದಿದ್ದು, ಇದರ ಹಿಂದೆ ರಾಜಕಾರಣಿಗಳ ಪ್ರಭಾವಿ ಮುಖಂಡರ ಕೈವಾಡವಿರುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸೇವಾ ಅವಧಿಯ ಜ್ಯೇಷ್ಠತೆ ಪರಿಗಣಿಸಿ ಉಪಕುಲಪತಿ ಮತ್ತು ಅದಕ್ಕಿಂತ ಕೆಳಗಿನ ಹುದ್ದೆಗಳಿಗೆ ತಮ್ಮನ್ನೂ ಪರಿಗಣಿಸಬೇಕೆಂದು 2004ರಲ್ಲಿ ಬೋಧಕೇತರ ಸಿಬ್ಬಂದಿ ಒತ್ತಾಯಿಸಿದ್ದು ನಿಜ. ಆದರೆ ಯುಜಿಸಿಯಲ್ಲಾಗಲೀ ಅಥವಾ ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯಿದೆಯ ನಿಯಮಾವಳಿಗಳ ಪ್ರಕಾರವಾಗಲೀ ಇದು ಸಮ್ಮತವಲ್ಲ ಎಂಬುದನ್ನು ರಾಜ್ಯಪಾಲರು ಮನಗಾಣಬೇಕು ಎಂದು ದೂರಿನಲ್ಲಿ ವಿನಂತಿಸಿದ್ದಾರೆ. |