ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ಸರಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಹೆಸರು ಪ್ರಸ್ತಾಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಇದರಿಂದ ಅಕ್ರಮ ಗಣಿಗಾರಿಕೆ ಬಗ್ಗೆ ಆಂದೋಲನವನ್ನೇ ನಡೆಸುತ್ತಿದ್ದ ಕಾಂಗ್ರೆಸ್ ತೀವ್ರ ಇರಿಸುಮುರಿಸಿಗೊಳಗಾಗಿದೆ.
ಈ ಅಕ್ರಮ ಗಣಿಗಾರಿಕೆಯು ಸುಮಾರು 36 ಸಾವಿರ ಕೋಟಿ ರೂ. ಮೌಲ್ಯದ್ದು ಎಂಬ ಅಂಶವೂ ಬೆಳಕಿಗೆ ಬಂದಿದ್ದು, ಬಳ್ಳಾರಿ ಜಿಲ್ಲೆಯ ಪಟ್ಟಾ ಜಮೀನುಗಳಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಸರ್ಕಾರಕ್ಕೆ ನೂರಾರು ಕೋಟಿ ರೂ. ನಷ್ಟ ಸಂಭವಿಸಿದೆ ಎಂಬ ಅಂಶವನ್ನು ಲೋಕಾಯುಕ್ತರು ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಹೆಸರು ಪ್ರಸ್ತಾಪವಾಗಿರುವುದು ಕಾಂಗ್ರೆಸ್ಗೆ ತೀವ್ರ ಮುಜುಗರ ಅನುಭವಿಸುವಂತಾಗಿದೆ. ಅಕ್ರಮ ಗಣಿಗಾರಿಕೆ ಎಂದರೆ ಕೇವಲ ಬಿಜೆಪಿ ಮುಖಂಡರು ಮಾತ್ರ ನಡೆಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಲ್ಲಿ ಇದ್ದ ಸಂದರ್ಭದಲ್ಲಿಯೇ ಧರ್ಮಸಿಂಗ್ ಅವರ ಹೆಸರು ಪ್ರಸ್ತಾಪವಾಗಿದೆ ಎಂಬ ಅಂಶ ಕಾಂಗ್ರೆಸ್ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಇದರೊಂದಿಗೆ ಈ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಟು ಅಧಿಕಾರಿಗಳ ಹೆಸರೂ ಪ್ರಸ್ತಾಪವಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಪಟ್ಟಾ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವುದರಿಂದ 80 ಕೋಟಿ ರೂ.ನಷ್ಟು ಸರ್ಕಾರಕ್ಕೆ ನಷ್ಟವಾಗಿದೆ. ಇದಕ್ಕೆ ಧರ್ಮಸಿಂಗ್ ಹಾಗೂ ಇಬ್ಬರು ಅಧಿಕಾರಿಗಳು ಕಾರಣಕರ್ತರೆಂದು ಲೋಕಾಯುಕ್ತರು ದೂರಿದ್ದಾರೆ. |