ಎಪ್ಪತ್ತೈದನೇ ಅಖಿಲ ಭಾರತ ಅಮೃತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ| ಎಲ್. ಬಸವರಾಜು ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿದೆ. ಸಮ್ಮೇಳನವು ಜ.29 ರಿಂದ ಫೆ. 1ರ ವರೆಗೆ ಚಿತ್ರದುರ್ಗದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಸಾಪ ರಾಜ್ಯಾಧ್ಯಕ್ಷ ಡಾ| ನಲ್ಲೂರು ಪ್ರಸಾದ್, ಚಾರಿತ್ರಿಕ ಮಹತ್ವ ಹೊಂದಿದ ಅಮೃತ ಸಾಹಿತ್ಯ ಸಮ್ಮೇಳನಕ್ಕೆ ಯಾರನ್ನು ಆರಿಸಬೇಕೆಂಬ ಬಗ್ಗೆ ಚರ್ಚೆ ನಡೆದು ಸರ್ವಾನುಮತದಿಂದ ಡಾ.ಎಲ್. ಬಸವರಾಜು ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಯಾವುದೇ ರೀತಿ ಗೊಂದಲಕ್ಕೂ ಎಡೆಮಾಡಿಕೊಡದೆ ಆಯ್ಕೆ ನಡೆದಿರುವುದು ಸಂತಸ ತಂದಿದೆ ಎಂದರು.
1919 ಅಕ್ಟೋಬರ 5 ರಂದು ಕೋಲಾರ ಜಿಲ್ಲೆಯ ಎಡಗೂರು ಗ್ರಾಮದಲ್ಲಿ ಜನಿಸಿದ ಬಸವರಾಜು ಅವರು ವೃತ್ತಿಯಿಂದ ಪ್ರಾಧ್ಯಾಪಕರಾದರೂ, ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ, ವೀರಶೈವ ಸಾಹಿತ್ಯ-ಸಿದ್ಧಾಂತಗಳ ಶೋಧನೆ, ಅಧ್ಯಯನ, ವ್ಯಾಖ್ಯಾನ, ಸಂಪಾದನೆಗಳಲ್ಲಿ ತೊಡಗಿದ್ದಾರೆ.
ಶೂನ್ಯ ಸಂಪಾದನೆ, ಕನ್ನಡ ಛಂದಸ್ಸು, ಶಿವದಾಸ ಗೀತಾಂಜಲಿ, ಭಾಸನ ಭಾರತ ರೂಪಕ, ನಾಟಕಾಮೃತ ಬಿಂದುಗಳು, ಅಲ್ಲಮನ ವಚನಗಳು, ದೇವರ ದಾಸೀಮಯ್ಯನ ವಚನಗಳು, ಭಾಸರಾಮಾಯಣ, ತ್ರಿವೇಣಿ ನಾಟಕ ಇವರ ಪ್ರಮುಖ ಕೃತಿಗಳಲ್ಲಿ ಕೆಲವು.
ಪಂಪ ಪ್ರಶಸ್ತಿ, ಬಸವ ಪುರಸ್ಕಾರ (2005), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1994), ಕೇಂದ್ರ ಸಾಹಿತ್ಯ ಅಕಾಡೆಮಿಯ 2006ರ ಭಾಷಾ ಸಮ್ಮಾನ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾದ ಈ ಹಿರಿಯ ವಿದ್ವಾಂಸರು ಪ್ರಾಚೀನ ಸಾಹಿತ್ಯಕ್ಕೆ ಸ್ಮರಣೀಯ ಕೊಡುಗೆ ನೀಡಿರುವುದರಿಂದ ಇವರ ಆಯ್ಕೆ ಸೂಕ್ತವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗಾಗಿ ಹಿರಿಯ ಸಂಶೋಧಕ ಎಂ ಚಿದಾನಂದಮೂರ್ತಿ ಹಾಗೂ ಲೇಖಕ ಬರಗೂರು ರಾಮಚಂದ್ರಪ್ಪ ಅವರ ಹೆಸರು ಕೇಳಿಬಂದಿತ್ತು. ಆದರೆ ಹಿರಿತನದ ಆಧಾರದ ಮೇಲೆ ಎಲ್ ಬಸವರಾಜು ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿಸಲು ತೀರ್ಮಾನಿಸಲಾಯಿತು ಎಂದು ಕಸಾಪ ಮೂಲಗಳು ತಿಳಿಸಿವೆ. ಚಿದಾನಂದ ಮೂರ್ತಿಯವರ ಆಯ್ಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಒಂದೊಮ್ಮೆ ಅವರ ಆಯ್ಕೆಯಾದರೆ ಪರ್ಯಾಯ ಸಮ್ಮೇಳನ ನಡೆಸುವ ಬೆದರಿಕೆಯನ್ನೂ ಕೆಲವರು ಹಾಕಿದ್ದರು ಎನ್ನಲಾಗಿದೆ.
|