ಈ ತಿಂಗಳ 27ರಂದು ನಡೆಯಲಿರುವ ಉಪಚುನಾವಣೆಗಳಲ್ಲಿ ಕುರುಬ ಸಮುದಾಯದ ಜನ ಬಿಜೆಪಿಗೆ ಮತ ಚಲಾಯಿಸಬೇಕೆಂದು ಶಾಸಕ ವರ್ತೂರು ಪ್ರಕಾಶ್ ನೀಡಿರುವ ಹೇಳಿಕೆಗೆ ಅದೇ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿರುವ ವರ್ತೂರು ಪ್ರಕಾಶ್ ಮತ್ತು ಅಹಿಂದ ನಾಯಕ ಮುಕುಡಪ್ಪ ಸ್ವಯಂ ಘೋಷಿತ ನಾಯಕರಾಗಿದ್ದು, ಅವರು ಕುರುಬ ಸಮುದಾಯದ ನಾಯಕರಲ್ಲ. ಅವರ ಮಾತಿಗೆ ಯಾರೂ ಬೆಲೆ ಕೊಡಬೇಕಾಗಿಲ್ಲ ಎಂದು ಈ ನಾಯಕರು ಸಷ್ಟಪಡಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ. ಮಾಜಿ ಸಚಿವರಾದ, ಎಚ್.ವಿಶ್ವನಾಥ್, ಎಚ್.ಎಂ. ರೇವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ರಾಮಚಂದ್ರಪ್ಪ, ಮಾಜಿ ಮೇಯರ್ ಹುಚ್ಚಪ್ಪ ಅವರು ವರ್ತೂರು ಪ್ರಕಾಶ್ ಹಾಗೂ ಮುಕುಡಪ್ಪ ಅವರ ಹೇಳಿಕೆಗಳನ್ನು ಖಂಡಿಸಿದರು.
ಬಿಜೆಪಿ ಅಧ್ಯಕ್ಷ ಸದಾನಂದಗೌಡರೇ ಹೇಳಿರುವಂತೆ ವರ್ತೂರು ಪ್ರಕಾಶ್ 'ಮೆಂಟಲ್ ಗಿರಾಕಿ' ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ವಿಶ್ವನಾಥ್, ಈ ಇಬ್ಬರು ನಾಯಕರಿಗೆ ಕುರುಬ ಜನಾಂಗದ ಪರವಾಗಿ ಮಾತನಾಡುವಂತೆ ಯಾರೂ 'ಪವರ್ ಆಫ್ ಅಟಾರ್ನಿ' ಬರೆದುಕೊಟ್ಟಿಲ್ಲ. ಯಾವುದೇ ಜಾತಿ ಸಂಘಟನೆಗಳು ಒಂದು ಪಕ್ಷದ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. |