ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವ ಬದಲಿಗೆ ದ್ವಿತೀಯ ಪಿಯುಸಿಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆಯೇ ಪ್ರವೇಶ ಕಲ್ಪಿಸಬೇಕೆಂಬ ಗಂಭೀರ ಚಿಂತನೆ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ ತಿಳಿಸಿದ್ದಾರೆ.
ಸಿಇಟಿ ಪರೀಕ್ಷೆ ರದ್ದುಪಡಿಸಿ ದ್ವಿತೀಯ ಪಿಯುಸಿ ಪರೀಕ್ಷೆ ಅಂಕಗಳ ಮೆರಿಟ್ ಮೇಲೆ ಕೌನ್ಸೆಲಿಂಗ್ ಮೂಲಕ ಇಂಜಿನಿಯರಿಂಗ್, ವೈಯಕೀಯ, ದಂತ ವೈದ್ಯಕೀಯ ಮತ್ತಿತರ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಬೇಕೆಂಬ ಆಲೋಚನೆ ನಡೆದಿದೆ. ಈ ಚಿಂತನೆ ಅನುಷ್ಠಾನಕ್ಕೆ ಬಂದರೆ ಆಗ ಸಿಇಟಿ, ಕಾಮೆಡ್-ಕೆ ಪರೀಕ್ಷೆ ಇರುವುದಿಲ್ಲ.
ಈ ಸಂಬಂಧ ಉನ್ನತ ಶಿಕ್ಷಣ ಸಚಿವರು ಮತ್ತು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಜತೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ವೈದ್ಯಕೀಯ ಶಿಕ್ಷಣದಲ್ಲಿ ಶೇ. 80 ಸೀಟುಗಳನ್ನು ಸರ್ಕಾರ ಇಟ್ಟುಕೊಂಡು ಉಳಿದ ಸೀಟು ಖಾಸಗಿಯವರಿಗೆ ಬಿಟ್ಟುಕೊಡುವ ಚಿಂತನೆ ಇದೆ. ಉಳಿದ 20ರಷ್ಟು ಸೀಟುಗಳಿಗೆ ಖಾಸಗಿಯವರು ಎಷ್ಟು ಬೇಕಾದರೂ ವಂತಿಗೆ ಪಡೆಯಬಹುದಾಗಿರುತ್ತದೆ ಎಂದು ಸಚಿವರು ತಿಳಿಸಿದರು.
ಡಾಕ್ಟರೇಟ್‌ಗೆ ಸಮರ್ಥನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಮೆರಿಕದ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದನ್ನು ಸಮರ್ಥಿಸಿಕೊಂಡ ಸಚಿವರು ರೈತರಿಗೆ ಶೇ. 3ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಿದರೆ ರೈತ ಸಮುದಾಯಕ್ಕೆ ಒಳ್ಳೆಯದಾಗುತ್ತದೆ ಎಂಬುದನ್ನು ಯೋಚಿಸಿ ಜಾರಿಮಾಡಿರುವುದು ಯಡಿಯೂರಪ್ಪನವರ ಸಾಧನೆಯಲ್ಲವೇ ಎಂದು ಪ್ರಶ್ನಿಸಿದರು. |