ಕನ್ನಡ ಚಲನಚಿತ್ರ ರಂಗಕ್ಕೆ ಪೂರಕವಾಗಿ ಸಾಹಿತಿಗಳು ಕಾರ್ಯೋನ್ಮುಖರಾಗಬೇಕಾದುದು ಇಂದಿನ ಅಗತ್ಯವಾಗಿದ್ದು ಕುಸಿಯುತ್ತಿರುವ ಕನ್ನಡ ಚಿತ್ರಗಳ ಸಾಹಿತ್ಯ, ಚಿತ್ರಕಥೆಗೆ ಜೀವ ತಂದುಕೊಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಅಭಿಪ್ರಾಯಿಸಿದ್ದಾರೆ.ಕನ್ನಡ ಚಿತ್ರ ನಿರ್ಮಾಪಕರ ಸಂಗ ಹಾಗೂ ಸುಚಿತ್ರಾ ಫಿಲ್ಮ್ ಸೊಸೈಟಿ ಜಂಟಿಯಾಗಿ ಏರ್ಪಡಿಸಿದ್ದ 'ಕನ್ನಡ ಚಿತ್ರರಂಗಕ್ಕೆ 75 ವರ್ಷಗಳು: ಒಂದು ಅವಲೋಕನ' ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ನೆರೆ ರಾಜ್ಯಗಳಲ್ಲಿನ ಉತ್ಕೃಷ್ಟ ಸಾಹಿತಿಗಳು, ಜ್ಞಾನಪೀಠ ಪುರಸ್ಕೃತರು ಚಿತ್ರರಂಗಕ್ಕೆ ಪೂರಕವಾದ ಕಾರ್ಯಗಳಲ್ಲಿ ತೊಡಗುತ್ತಾರೆ. ನಮ್ಮಲ್ಲಿನ ಸಾಹಿತಿಗಳೂ ಚಿತ್ರರಂಗದಲ್ಲಿ ಕಥೆ, ಸಂಭಾಷಣೆ, ಸಾಹಿತ್ಯ ಮುಂತಾದ ಕಾರ್ಯದಲ್ಲಿ ತೊಡಗುವುದು ಅಗತ್ಯವಾಗಿದೆ ಎಂದು ನುಡಿದರು. ಕನ್ನಡ ಚಿತ್ರರಂಗದಲ್ಲಿ ರಿಮೇಕ್ ಸಂಸ್ಕೃತಿ ಬಂದಿರುವುದೇ ನಮ್ಮಲ್ಲಿ ಉತ್ತಮ ಕಥೆಗಳಿಲ್ಲದಿರುವ ಕಾರಣಕ್ಕೆ. ಹೀಗಾಗಿ ನಮ್ಮ ಸಾಹಿತಿಗಳು ಚಿತ್ರರಂಗಕ್ಕೆ ಪ್ರವೇಶಿಸಿದರೆ ಅವರಿಗೆ ಕೆಂಪುಹಾಸಿನ ಸ್ವಾಗತ ಕೋರಲಾಗುವುದು ಎಂದರು.ಅಧ್ಯಯನ ಪೀಠ: ಪ್ರೇಕ್ಷಕರ ನಾಡಿಮಿಡಿತ ಉಂಟುಮಾಡುವ ಚಿತ್ರನಿರ್ಮಾಣ ಮಾಡಬೇಕಾಗಿದೆ. ಚಿತ್ರರಂಗವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡುವ ಕಾರ್ಯ ನಡೆಯಲೇಬೇಕಿದ್ದು, ಇದಕ್ಕಾಗಿ ಕನ್ನಡ ಚಲನಚಿತ್ರ ಅಧ್ಯಯನ ಪೀಠ ರಚಿಸಬೇಕಿದೆ ಎಂದು ಅವರು ಪ್ರತಿಪಾದಿಸಿದರು. ಇದೇ ಸಂದರ್ಭದಲ್ಲಿ 'ಕನ್ನಡ ಚಿತ್ರೋದ್ಯಮ-ಇಂದಿನ ಸ್ಥಿತಿಗತಿ', 'ಕನ್ನಡ ಚಿತ್ರ ಸಂಗೀತ ನಡೆದು ಬಂದ ದಾರಿ', 'ಇತ್ತೀಚಿನ ಕನ್ನಡ ಚಿತ್ರಗಳ ಸಾಂಸ್ಕೃತಿಕ ರೂಪುರೇಷೆಗಳು', 'ಇಂದಿನ ಕನ್ನಡ ಚಿತ್ರೋದ್ಯಮದಲ್ಲಿ ವೃತ್ತಿಪರತೆ', 'ಕನ್ನಡ ಚಿತ್ರರಂಗದ ಮುಂದಿನ ಸವಾಲುಗಳು' ಕುರಿತ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. |