ಮಧುಗಿರಿ ಕ್ಷೇತ್ರದಲ್ಲಿ ಬಿಜೆಪಿ ಪರ ಹಂಚಲು ಧರ್ಮಕ್ಷೇತ್ರಗಳಿಂದಲೇ ಹಣ ರವಾನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಹುಕ್ಕೇರಿಗೆ ತಮ್ಮ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳುವ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೆನ್ನಿಗಪ್ಪ ಅವರನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿರುವ ಬಿಜೆಪಿ, ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಪೊಲೀಸ್ ಜೀಪುಗಳಲ್ಲೇ ಹಣ ಸಾಗಣೆಯಾಗುತ್ತಿರುವುದು ದುರಂತ ಎಂದು ದೂರಿದರು.
ಹುಕ್ಕೇರಿಯಲ್ಲೂ ಸಹ ಅದೆ ಪರಿಸ್ಥಿತಿ ಇದ್ದು, ಇಲ್ಲಿಯೂ ಅಕ್ರಮ ಮತದಾನ ನಡೆಯುವ ಸಾಧ್ಯತೆಗಳು ಇವೆ. ಅದಕ್ಕೆ ಬೇಕಾದ ಎಲ್ಲ ಏರ್ಪಾಡುಗಳನ್ನು ಬಿಜೆಪಿ ಮಾಡಿಕೊಂಡಿದೆ ಎಂದ ಕುಮಾರಸ್ವಾಮಿ, ಚುನಾವಣಾ ಆಯೋಗ ಈಗಲಾದರೂ ಕಠಿಣ ಕ್ರಮಗಳನ್ನು ಕೈಗೊಂಡು ನ್ಯಾಯಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸುವಂತೆ ಆಗ್ರಹಿಸಿದರು.
ಸಿದ್ದರಾಮಯ್ಯನವರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಜೆಡಿಎಸ‌್‌ನಲ್ಲಿದ್ದಾಗ ರಾಜನಂತಿದ್ದ ಅವರು ಕಾಂಗ್ರೆಸ್‌ಗೆ ಹೋಗಿ ಮೂಲೆಗುಂಪಾಗಿದ್ದಾರೆ. ಈಗ ಅಧಿಕಾರ ಹಾಗೂ ರಾಜಕೀಯದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದನ್ನು ಪರಿಹರಿಸಿಕೊಳ್ಳುವ ಸಲುವಾಗಿ ಅಹಿಂದ ಮೊರೆ ಹೋಗಿದ್ದಾರೆ ಎಂದು ಕುಟುಕಿದರು. |