ಉಪಚುನಾವಣೆ ನಡೆಯುತ್ತಿರುವ ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ 5 ಸಾವಿರಕ್ಕೂ ಹೆಚ್ಚು ಸೀರೆಗಳನ್ನು ಸಾಗಿಸುತ್ತಿದ್ದ ಗೂಡ್ಸ್ ಟೆಂಪೋವನ್ನು ಜೆಡಿಎಸ್ ಕಾರ್ಯಕರ್ತರು ಅಡ್ಡಗಟ್ಟಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಾಲೀಕಿನ ಬೆಸಗರಹಳ್ಳಿ ಅಡ್ಡರಸ್ತೆಯಲ್ಲಿ ಈ ಪ್ರಕರಣ ನಡೆದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಡ್ಯ ತಾಲೂಕು ಜೀಗುಂಡಿಪಟ್ಟಣದವನಾದ ಗೂಡ್ಸ್ ಟೆಂಪೋ ಚಾಲಕ ಶಿವಕುಮಾರ್, ಕ್ಲೀನರ್ ಚಿಕ್ಕಣ್ಣನನ್ನು ಬಂಧಿಸಿದ್ದು, ಸೀರೆ ಹಾಗೂ ಗೂಡ್ಸ್ ಟೆಂಪೋವನ್ನು ಬೆಸಗರಹಳ್ಳಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿಜೆಪಿಯ ಕಾರ್ಯಕರ್ತರು ಎಂದು ಹೇಳಲಾಗಿರುವ ನಾಲ್ವರು ಸಿಟಿಎಂ 9640 ನಂಬರ್ ಗೂಡ್ಸ್ ಟೆಂಪೋವನ್ನು ಬಾಡಿಗೆಗೆ ಪಡೆದು ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆ ಸ್ಯಾಂಜೋ ಆಸ್ಪತ್ರೆಯ ಬಳಿ ನಿಲ್ಲಿಸಿ ಬೆಂಗಳೂರಿನಿಂದ ಸೀರೆಯನ್ನು ತುಂಬಿಕೊಂಡು ಬಂದಿದ್ದ ಲಾರಿಯಿಂದ 23 ಬಂಡಲ್‌ಗಳ ಐದು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಸೀರೆಯನ್ನು ಟೆಂಪೋಗೆ ತುಂಬಿಕೊಂಡು ಬೆಸಗರ ಹಳ್ಳಿ ಕಡೆ ಹೊರಟಿದ್ದರು.
ಮಾಹಿತಿ ತಿಳಿದ ಚುನಾವಣಾಧಿಕಾರಿ ಸಿ.ಎಸ್. ಅನಂತು, ಸರ್ಕಲ್ ಇನ್‍ಸ್ಪೆಕ್ಟರ್ ಚಂದ್ರಪ್ಪ ಸ್ಥಳಕ್ಕೆ ಧಾವಿಸಿ ಕ್ಲೀನರ್ ಹಾಗೂ ಚಾಲಕನನ್ನು ಟೆಂಪೋ ಹಾಗೂ ಸೀರೆ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸೀರೆಗಳನ್ನು ದಾಸ್ತಾನು ಮಾಡಲು ಟೆಂಪೋವನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ನಾಲ್ವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. |